ಹೈದರಾಬಾದ್ : ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಗೆ ತಿಂಗಳ ಹಿಂದೆ ವ್ಯಕ್ತಿಯೊಬ್ಬ ಹೆಚ್‌ಐವಿ ಪಾಸಿಟಿವ್ ರಕ್ತ ಇಂಜೆಕ್ಟ್ ಮಾಡಿದ್ದ, ಈ ಘಟನೆಯಿಂದ ಭೀತಿಗೆ ಒಳಗಾಗಿದ್ದ, ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಾರ್ಚ್ 11 ರಂದು ಈ ಘಟನೆ ನಡೆದಿತ್ತು. ಆರೋಪಿ ಮನೋಹರ್ ಎಂಬಾತ ಯುವತಿಗೆ ಮನೆಯಲ್ಲಿ ಬಲವಂತವಾಗಿ ತನ್ನ ಹೆಚ್‌ಐವಿ ಸೋಂಕಿತ ರಕ್ತವನ್ನು ಇಂಜೆಕ್ಟ್ ಮಾಡಿದ್ದ. ಆರೋಪಿ ಜೊತೆ ಯುವತಿ ಮದುವೆ ನಿರಾಕರಿಸಿದ್ದಕ್ಕೆ ಈ ಕೃತ್ಯ ಎಸಗಿದ್ದ.
ಆರೋಪಿ ಮನೋಹರ್ ಮತ್ತು ಯುವತಿ ಸಂಬಂಧಿಕರು. ಆತನ ಜೊತೆ ತಮ್ಮ ಮಗಳ ಮದುವೆ ಮಾಡಲು ಪೋಷಕರು ಮೊದಲೇ ಯೋಜಿಸಿದ್ದರು. ಆದರೆ, ಆರೋಪಿಯ ಪೋಷಕರು ಹೆಚ್ಐವಿ ಪೀಡಿತರಾಗಿದ್ದರು. ಯುವತಿಯ ಪೋಷಕರು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಹುಡುಗನಿಗೂ ವೈರಸ್ ಪರೀಕ್ಷೆ ಮಾಡಿಸಿದ್ದರು.
ಅದರಲ್ಲಿ ಅವನಿಗೂ ಸೋಂಕು ಇರುವುದು ದೃಢಪಟ್ಟಿತು. ಯುವತಿ ತಕ್ಷಣ ಮದುವೆಯನ್ನು ರದ್ದುಗೊಳಿಸಿದಳು. ಇದರಿಂದ ಕುಪಿತಗೊಂಡು ಆರೋಪಿ ಆಕೆಗೆ ಹೆಚ್‌ಐವಿ ಇಂಜೆಕ್ಷನ್ ನೀಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈ ಘಟನೆ ನಡೆದು ಸುಮಾರು ಒಂದು ತಿಂಗಳ ನಂತರ ಯುವತಿ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಘಟನೆಯಿಂದ ಯುವತಿ ತೀವ್ರ ಮಾನಸಿಕ ಒತ್ತಡದಲ್ಲಿದ್ದಳು. ಭಯ, ಸಾಮಾಜಿಕ ಕಳಂಕ ಮತ್ತು ಭಾವನಾತ್ಮಕ ಆಘಾತವನ್ನು ಅನುಭವಿಸಿದ್ದಳು. ಹೀಗಾಗಿ, ಆತ್ಮಹತ್ಯೆ ದಾರಿ ಹಿಡಿದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.














