ಮನೆ ರಾಜ್ಯ ಎಚ್.ಎಂಟಿ ಭೂಮಿ ಕೇಂದ್ರದ್ದಲ್ಲ, 7 ಕೋಟಿ ಕನ್ನಡಿಗರ ಆಸ್ತಿ- ಬಿಜೆಪಿಗೆ ಈಶ್ವರ ಖಂಡ್ರೆ ತಿರುಗೇಟು

ಎಚ್.ಎಂಟಿ ಭೂಮಿ ಕೇಂದ್ರದ್ದಲ್ಲ, 7 ಕೋಟಿ ಕನ್ನಡಿಗರ ಆಸ್ತಿ- ಬಿಜೆಪಿಗೆ ಈಶ್ವರ ಖಂಡ್ರೆ ತಿರುಗೇಟು

ಡಿನೋಟಿಫೈ ಆಗದಿದ್ದರೆ ಒಮ್ಮೆ ಅರಣ್ಯ, ಸದಾ ಅರಣ್ಯವೇ ಎಂದಿದೆ ಸುಪ್ರೀಂಕೋರ್ಟ್: ಖಂಡ್ರೆ

0

ಬೆಂಗಳೂರು, ಅ.2: ಸರ್ವೋನ್ನತ ನ್ಯಾಯಾಲಯ “Once A Forest, Always A Forest Unless De-Notified’ ಅಂದರೆ ಅರಣ್ಯೇತರ ಉದ್ದೇಶಕ್ಕೆ ಡಿನೋಟಿಫೈ ಆಗದ ಹೊರತು ಒಂದು ಬಾರಿ ಅರಣ್ಯ ಎಂದು ಅಧಿಸೂಚನೆ ಆದ ಭೂಮಿ ಸದಾ ಅರಣ್ಯವಾಗೇ ಇರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ಡಿನೋಟಿಫೈ ಆಗದ ಎಚ್.ಎಂ.ಟಿ. ಭೂಮಿ ಇಂದಿಗೂ ಅರಣ್ಯ ಇಲಾಖೆಯ ಸ್ವತ್ತು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ವಕ್ತಾರ ಎನ್.ಆರ್. ರಮೇಶ್,  ‘ಎಚ್.ಎಂ.ಟಿ. ಜಾಗ ಕೇಂದ್ರದ್ದು, ಅರಣ್ಯ ಸಚಿವರು ಸಂಪೂರ್ಣ ದಾಖಲೆ ಅಧ್ಯಯನ ಮಾಡಿದ ಬಳಿಕವಷ್ಟೇ ಅಭಿಪ್ರಾಯ ವ್ಯಕ್ತಪಡಿಸಬೇಕು’ ಎಂದು ನೀಡಿರುವ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಖಂಡ್ರೆ, ಬಿಜೆಪಿ ಹೇಳಿಕೆ ಖಂಡನೀಯ. ಉತ್ತರ ಬೆಂಗಳೂರಿನಲ್ಲಿ ಶ್ವಾಸ ಪ್ರದೇಶವೇ ಇಲ್ಲ. ಈ ಜಾಗ ಆ ಭಾಗದ ಜನರ ಉಸಿರಾಟದ ತಾಣ ಎಂದು ಹೇಳಿದ್ದಾರೆ.

 ಡಿನೋಟಿಫೈ ಆಗಿಲ್ಲ ಎಂಬ ಕಾರಣಕ್ಕೆ ಶರಾವತಿ ಮುಳುಗಡೆ ಸಂತ್ರಸ್ತರಿಗೆ ನೀಡಿದ ಭೂಮಿಗೇ ಹಕ್ಕು ನೀಡಲು ಸಾಧ್ಯವಾಗಿಲ್ಲ. ಅದೇ ರೀತಿ ಡಿನೋಟಿಫೈ ಆಗದ ಪೀಣ್ಯ -ಜಾಲಹಳ್ಳಿ ಪ್ಲಾಂಟೇಷನ್ ಸರ್ವೆ ನಂ.1 ಮತ್ತು 2ರಲ್ಲಿನ 599 ಎಕರೆ ಭೂಮಿ ಮೇಲೆ ಅದು ಹೇಗೆ ಎಚ್.ಎಂ.ಟಿ.ಗೆ ಹಕ್ಕು ಬರುತ್ತದೆ ಎಂದು ಪ್ರಶ್ನಿಸಿದ್ದಾರೆ.

ಸರ್ವೋನ್ನತ ನ್ಯಾಯಾಲಯ ‘Environment is more important than civil rights. Civil rights are subordinate to the environment’ ಪರಿಸರ ಹಕ್ಕು ಯಾವುದೇ ಇತರ ನಾಗರಿಕ ಹಕ್ಕಿಗಿಂತ ಮಿಗಿಲಾದ್ದು ಎಂದು ಅಭಿಪ್ರಾಯಪಟ್ಟಿದೆ. ಎಚ್.ಎಂ.ಟಿ. ತನ್ನ ವಶದಲ್ಲಿದ್ದ  ಸಾವಿರಾರು ಕೋಟಿ ರೂ. ಬೆಲೆ ಬಾಳುವ ಅರಣ್ಯ ಭೂಮಿಯನ್ನು ನೂರಾರು ಕೋಟಿಗೆ ಮಾರಾಟ ಮಾಡಿದೆ. ಇನ್ನಷ್ಟು ಭೂಮಿಯನ್ನು ಅತ್ಯಲ್ಪ ದರಕ್ಕೆ ಪರಭಾರೆ ಮಾಡಬೇಕೇ ಎಂದು ಬಿಜೆಪಿಗೆ ಪ್ರಶ್ನಿಸಿದ್ದಾರೆ.

ಲಾಲ್ ಬಾಗ್ ರೀತಿ ಅಭಿವೃದ್ಧಿ:

ಪೀಣ್ಯ- ಜಾಲಹಳ್ಳಿ (ಎಚ್.ಎಂ.ಟಿ. ಭೂಮಿ)ಯಲ್ಲಿ ಇನ್ನೂ ಸುಮಾರು 285 ಎಕರೆ ಪ್ರದೇಶದಲ್ಲಿ ದಟ್ಟ ಅರಣ್ಯವಿದೆ. ಹಚ್ಚ ಹಸಿರಿನಿಂದ ನಳ ನಳಿಸುತ್ತಿದೆ. ತಾವು ಕಳೆದ ವಾರ ಸ್ಥಳ ಪರಿಶೀಲನೆಗೆ ಹೋದಾಗ ದಟ್ಟ ಅರಣ್ಯದಂತಿರುವ ಈ ಪ್ರದೇಶದಲ್ಲಿ ಮೊಲ, ನವಿಲು, ಗಿಣಿಗಳ ಹಿಂಡಿತ್ತು. ದಟ್ಟ ಕಾಡಿನಂತೆಯೇ ಇರುವ ಈ ಭೂಮಿಯನ್ನು ಮರಳಿ ಅರಣ್ಯ ಇಲಾಖೆ ಪಡೆದು ಇಲ್ಲಿ ಲಾಲ್ ಬಾಗ್ ರೀತಿಯಲ್ಲಿ ಸಸ್ಯೋದ್ಯಾನ ಅಭಿವೃದ್ಧಿ ಪಡಿಸಲಾಗುವುದು. ಇದು ಉತ್ತರ ಬೆಂಗಳೂರಿಗರ ಶ್ವಾಸ ತಾಣವೇ ಹೊರತು ಕೇಂದ್ರ ಸರ್ಕಾರದ ಸ್ವತ್ತಲ್ಲ. ಇದಕ್ಕೆ ಉತ್ತರ ಬೆಂಗಳೂರಿನ ಜನರೇ ತಕ್ಕ ಉತ್ತರ ನೀಡುತ್ತಾರೆ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.

ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆ ಎಚ್.ಎಂ.ಟಿ.ಗೆ ಅಂದಿನ ಬೆಂಗಳೂರು ನಗರ ಜಿಲ್ಲಾಧಿಕಾರಿಯವರು ಯಾವುದೇ ಗೆಜೆಟ್ ಅಧಿಸೂಚನೆಯೂ ಇಲ್ಲದೆ, ಸಚಿವ ಸಂಪುಟದ ಅನುಮೋದನೆಯನ್ನೂ ಪಡೆಯದೆ, ಡಿನೋಟಿಫಿಕೇಷನ್ ಮಾಡದೆ ಕ್ರಯ ಮತ್ತು ಗುತ್ತಿಗೆ ನೀಡಿರುವುದೇ ಕಾನೂನು ಬಾಹಿರವಾಗುತ್ತದೆ ಎಂದು ಇದನ್ನು ಬಿಜೆಪಿ ಮೊದಲು ಅರ್ಥ ಮಾಡಿಕೊಳ್ಳಬೇಕು. ರಾಜ್ಯದ ಅಮೂಲ್ಯ ಸಂಪತ್ತು ರಿಯಲ್ ಎಸ್ಟೇಟ್ ನವರ ಪಾಲಾಗಲು ಯಾರೂ ಬೆಂಬಲ ನೀಡಬಾರದು ಎಂದು ಎಚ್ಚರಿಸಿದ್ದಾರೆ.

ಈಗಾಗಲೇ ಎಚ್.ಎಂ.ಟಿ. 165 ಎಕರೆ ಭೂಮಿಯನ್ನು 300 ಕೋಟಿ ರೂ.ಗೆ ಖಾಸಗಿಯವರೂ ಸೇರಿದಂತೆ ಹಲವರಿಗೆ ಮಾರಾಟ ಮಾಡಿದೆ. 2015ರಲ್ಲೇ ಅರಣ್ಯ ಅಧಿಕಾರಿಯೊಬ್ಬರು ಕರ್ನಾಟಕ ಅರಣ್ಯ ಕಾಯಿದೆ 1963ರಡಿ 64 ಎ ಪ್ರಕ್ರಿಯೆ ನಡೆಸಿದ್ದಾರೆ. ಇದು ಅರಣ್ಯವಲ್ಲದೆ ಮತ್ತೇನು ಎಂದು ಪ್ರಶ್ನಿಸಿದ್ದಾರೆ.

ಈಗ 5 ದಶಕಗಳ ಬಳಿಕ ಅರಣ್ಯ ಇಲಾಖೆಯ ಕೆಲವು ಅಧಿಕಾರಿಗಳು ಸಚಿವರ ಮತ್ತು ಸಚಿವ ಸಂಪುಟದ ಗಮನಕ್ಕೂ ತಾರದೆ ಸುಪ್ರೀಂಕೋರ್ಟ್ ನಲ್ಲಿ ಈ ಪ್ರದೇಶ ಅರಣ್ಯ ಸ್ವರೂಪ ಕಳೆದುಕೊಂಡಿದೆ ಹೀಗಾಗಿ ಇದನ್ನು ಡಿ ನೋಟಿಫೈ ಮಾಡಿ ಎಂದು ಅರ್ಜಿ ಹಾಕಿದ್ದಾರೆ. ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲು ಸೂಚಿಸಿದ್ದೇನೆ. ಇದು ಅರಣ್ಯ ಅಲ್ಲದಿದ್ದರೆ ಐ.ಎ. ಹಾಕುವ ಅಗತ್ಯ ಏಕೆ ಬರುತ್ತಿತ್ತು, ಎನ್.ಆರ್. ರಮೇಶ್ ಅರಣ್ಯ ಕಾಯಿದೆ ಓದಿ ನಂತರ ಮಾತನಾಡಬೇಕು, ಅವರ ಹೇಳಿಕೆ ಖಂಡನೀಯ. ಸತ್ಯಮೇವ ಜಯತೆ ಎಂದು ತಿರುಗೇಟು ನೀಡಿದ್ದಾರೆ.