ಮನೆ ರಾಜ್ಯ ಹೊಳಲೂರು ಏತ ನೀರಾವರಿ ಉಳಿದ ಕಾಮಗಾರಿಗೆ ಶೀಘ್ರ ಕಾಯಕಲ್ಪ : ಸಚಿವ ಬೋಸರಾಜು

ಹೊಳಲೂರು ಏತ ನೀರಾವರಿ ಉಳಿದ ಕಾಮಗಾರಿಗೆ ಶೀಘ್ರ ಕಾಯಕಲ್ಪ : ಸಚಿವ ಬೋಸರಾಜು

0

ಶಿವಮೊಗ್ಗ : ಶಿವಮೊಗ್ಗ ಸಮೀಪದ ಹೊಳಲೂರು ಏತ ನೀರಾವರಿ ಉಳಿದ ಕಾಮಗಾರಿಯನ್ನು ಮುಂದಿನ ಮೂರು ತಿಂಗಳ ಅವಧಿಯಲ್ಲಿ ನೀರಾವರಿ ತಜ್ಞರ ಸಲಹೆಯ ಜೊತೆಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ರೈತಮುಖಂಡರೊಂದಿಗೆ ಸಮಾಲೋಚನೆ ನಡೆಸಿ, ಶೀಘ್ರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ರಾಜ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್.ಬೋಸರಾಜು ಅವರು ಹೇಳಿದರು.

ಇಂದು ಶಿವಮೊಗ್ಗ ತಾಲೂಕಿನ ಹೊಳಲೂರು ಏತ ನೀರಾವರಿ ಯೋಜನಾ ಪ್ರದೇಶದ ವ್ಯಾಪ್ತಿಗೊಳಪಟ್ಟ ವಿವಿಧ ಸ್ಥಳಗಳಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಖುದ್ದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಈ ಕಾಮಗಾರಿ ಕೈಗೆತ್ತಿಕೊಳ್ಳುವ ಸಂಬಂಧ ಶೀಘ್ರದಲ್ಲಿ ಬೆಂಗಳೂರಿನಲ್ಲಿ ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಅವರು ತಿಳಿಸಿದರು.

ಈಗಾಗಲೇ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶ್ರೀಮತಿ ಶಾರದಾಪೂರ್ಯನಾಯ್ಕ್ಹಾಗೂ ಸ್ಥಳೀಯ ಮುಖಂಡರು ಅಪೂರ್ಣಗೊಂಡಿರುವ ಹಾಗೂ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಈ ಏತ ನೀರಾವರಿ ಯೋಜನೆಯ ಪ್ರಾಥಮಿಕ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡಿದ್ದು, 2008ರಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ಅಂದಿನ ಸರ್ಕಾರ ಸುಮಾರು 21ಕೋಟಿ ರೂ.ಗಳಿಗೆ ಅಧಿಕ ಮೊತ್ತ ವ್ಯಯ ಮಾಡಿರುವ ಬಗ್ಗೆ ಮಾಹಿತಿ ಇದೆ. ಈಗಿರುವ ಯಂತ್ರಗಳು ಹಾಗೂ ಅವುಗಳ ಸಾಮರ್ಥ್ಯದ ಬಗ್ಗೆಯೂ ಮಾಹಿತಿ ಪಡೆಯುವ ಅಗತ್ಯವಿದೆ ಎಂದ ಅವರು ಇಲ್ಲಿನ ಕಾಮಗಾರಿಯ ಕುರಿತು ಜನರಲ್ಲಿ ಸಾಕಷ್ಟು ದೂರುಗಳಿದ್ದು, ಅವುಗಳನ್ನು ಮುಂದಿನ ದಿನಗಳಲ್ಲಿ ಮಾಹಿತಿ ಪಡೆದು, ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಅದಕ್ಕೂ ಮುನ್ನ ಸ್ಥಗಿತಗೊಂಡ ಕಾಮಗಾರಿಯನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸಿ, ಲೋಕಾರ್ಪಣೆಗೊಳಿಸಲು ಅಗತ್ಯವಿರುವ ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು. ಈಗಾಗಲೇ ಜಿಲ್ಲೆಗೆ ಹಿಂದಿನ ಭೇಟಿ ಸಂದರ್ಭದಲ್ಲಿ ಸೊರಬ ತಾಲೂಕಿನಲ್ಲಿ ಆರು ಏತ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿರುವುದಾಗಿ ಅವರು ತಿಳಿಸಿದರು.

ಆಡಳಿತಾರೂಢ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಂಡಿಸಿದ 16ನೇ ಜನಪ್ರಿಯ ಬಜೆಟ್ಇದಾಗಿದ್ದು, ರಾಜ್ಯದ ಜನಸಾಮಾನ್ಯರ ನೋವು-ನಲಿವುಗಳನ್ನು ತಿಳಿದು, ಎಲ್ಲ ವರ್ಗದ ಜನರ ಹಿತಕಾಪಾಡುವ ನಿಟ್ಟಿನಲ್ಲಿ ಜನಸ್ನೇಹಿಯಾಗಿದೆ. ಅನ್ನಭಾಗ್ಯ ಯೋಜನೆಯ ವ್ಯವಸ್ಥಿತ ಅನುಷ್ಠಾನಕ್ಕೆ ಅಗತ್ಯವಿರುವಷ್ಟು ಹಣಕಾಸನ್ನು ಕಾಯ್ದಿರಿಸಲಾಗಿದೆ. ಅಲ್ಲದೇ ಗ್ಯಾರೆಂಟಿ ಯೋಜನೆಯ ಲಾಭವನ್ನು ರಾಜ್ಯದ ಜನರು ಯಾವುದೇ ಮದ್ಯವರ್ತಿಗಳ ಪ್ರವೇಶವಿಲ್ಲದೇ ನೇರವಾಗಿ ಪಡೆದುಕೊಳ್ಳುತ್ತಿದ್ದಾರೆ ಎಂದರು.