ಹೊಳೆನರಸೀಪುರ(Holenarasipura): ಮದುವೆ ಆಗುವಂತೆ ಪೀಡಿಸುತ್ತಿದ್ದ ಮಹಿಳೆಯನ್ನು ಕೊಂದು ಕಬ್ಬಿನಗದ್ದೆಯಲ್ಲಿ ಹೂತು ಹಾಕಿದ್ದ ಪ್ರಿಯಕರನನ್ನು ಹೊಳೆನರಸೀಪುರ ಪೊಲೀಸರು ಬಂಧಿಸಿದ್ದಾರೆ.
ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ ಸಮೀಪದ ಮುದ್ದಲಾ ಪುರದ ಬಿಬಿಎಂ ಪದವೀಧರೆ ಕಾವ್ಯಾ (29) ಕೊಲೆಯಾದ ಮಹಿಳೆ.
ಪರಸನಹಳ್ಳಿಯ ಅವಿನಾಶ್ ಬಂಧಿತ ಆರೋಪಿ.
ಮೃತ ಮಹಿಳೆಗೆ ಅಕ್ಷಯ್ ಎಂಬಾತನ ಜೊತೆಗೆ ಮೊದಲನೇ ವಿವಾಹವಾಗಿದ್ದು, ಆತನಿಂದ ವಿಚ್ಛೇದನ ಪಡೆದಿದ್ದರು.
ನಂತರ ಅವಿವಾಹಿತನಾಗಿದ್ದ ಅವಿನಾಶ್‌ನನ್ನು ಪ್ರೀತಿಸುತ್ತಿದ್ದರು. ಇಬ್ಬರೂ ವಿವಾಹವಾಗದಿದ್ದರೂ ಒಂದೇ ಕಡೆ ವಾಸವಿದ್ದರು. ಅವಿನಾಶ್ ಜೊತೆಯಲ್ಲಿದ್ದಾಗ ಪಿಜಿಯಲ್ಲಿ ಇರುವುದಾಗಿ ಕಾವ್ಯಾ ಪೋಷಕರಿಗೆ ತಿಳಿಸಿದ್ದರು.
ಆದರೆ, ನವೆಂಬರ್ 25ರಿಂದ ಕರೆ ಮಾಡದ ಕಾರಣ ಅನುಮಾನಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ನಡೆಸಿದಾಗ ಮಹಿಳೆಯನ್ನು 15 ದಿನದ ಹಿಂದೆಯೇ ಕೊಲೆ ಮಾಡಿರುವುದು ಬಹಿರಂಗವಾಗಿದೆ. ಮಂಗಳವಾರ ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಪ್ರದೀಪ್, ನಗರಠಾಣೆ ಎಸ್.ಐ. ಅರಣ್ ಕುಮಾರ್ ಶವವನ್ನು ಹೊರಕ್ಕೆ ತೆಗಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.














