ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. ಈ ಭೇಟಿಗೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಿಎಂ ಮತ್ತು ಡಿಸಿಎಂ ದೆಹಲಿಗೆ ಏಕೆ ಹೋಗಿದ್ದಾರೆ ಎಂಬ ಮಾಹಿತಿ ನನಗೆ ಲಭ್ಯವಿಲ್ಲ. ಅವರು ಬಹುಶಃ ಕಾಲ್ತುಳಿತ ಪ್ರಕರಣದ ಬಗ್ಗೆ ಪಕ್ಷದ ಹೈಕಮಾಂಡ್‌ಗೆ ಮಾಹಿತಿ ನೀಡಲು ಹೋಗಿರಬಹುದು. ನನಗೆ ಹೈಕಮಾಂಡ್ ಕರೆ ಮಾಡಿಲ್ಲ. ಅವರು ಕರೆ ಮಾಡಿದರೆ, ನಾನು ಕೂಡ ದೆಹಲಿಗೆ ಹೋಗಲು ಸಿದ್ಧನಿದ್ದೇನೆ” ಎಂದು ಸ್ಪಷ್ಟಪಡಿಸಿದರು.
ಇದರೊಂದಿಗೆ, ಬೆಂಗಳೂರಿನಲ್ಲಿ ನಡೆದ ದುರಂತದ ಕುರಿತು ಸರಕಾರದ ಮಟ್ಟದಲ್ಲಿ ನಡೆದ ಚರ್ಚೆಗಳ ಬಗ್ಗೆ ಮಾಹಿತಿ ನೀಡಿದ ಪರಮೇಶ್ವರ್, “ನಿನ್ನೆ ಕಾಲ್ತುಳಿತ ಪ್ರಕರಣ ಕುರಿತು ಸಭೆ ನಡೆಸಿದ್ದೆವು. ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕಾದ ವರದಿಯ ಬಗ್ಗೆ ಚರ್ಚೆಯಾಯಿತು ಎಂದು ತಿಳಿಸಿದರು.
ಈ ನಡುವೆ ಗೃಹ ಸಚಿವ ಪರಮೇಶ್ವರ್ ಅವರ ‘ನನಗೆ ಕರೆ ಬಂದಿಲ್ಲ’ ಎಂಬ ಹೇಳಿಕೆ ಹಲವಾರು ಊಹಾಪೋಹಗಳಿಗೆ ದಾರಿ ಮಾಡಿದೆ. ದೆಹಲಿಗೆ ತೆರಳಿರುವ ಮುಖ್ಯ ನಾಯಕರು ಹಾಗೂ ರಾಜ್ಯದ ಗೃಹ ಸಚಿವರ ನಡುವಿನ ಸಂವಹನದ ಕೊರತೆ ಅಥವಾ ಮಾಹಿತಿ ಹಂಚಿಕೆಯಲ್ಲಿ ವ್ಯತ್ಯಯವಿದೆಯೇ ಎಂಬ ಪ್ರಶ್ನೆ ಕೂಡ ಎದ್ದಿದೆ.














