ಹೊನ್ನಾವರ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಂಚರಿಸುತ್ತಿದ್ದ ಹೆಲಿಕಾಪ್ಟರ್’ಗೆ ಹದ್ದು ಡಿಕ್ಕಿಯಾದ ಘಟನೆ ಮಾಸುವ ಬೆನ್ನಲ್ಲೇ ಅವರು ಬಂದಿಳಿದ ಹೆಲಿಪ್ಯಾಡ್ ಬಳಿ ಬೆಂಕಿ ಕಾಣಿಸಿಕೊಂಡಿದೆ.
ಗುರುವಾರ ಮೈಸೂರಿನಿಂದ ಹೊನ್ನಾವರಕ್ಕೆ ಹೆಲಿಕಾಪ್ಟರ್’ನಲ್ಲಿ ತೆರಳಿದ್ದ ಶಿವಕುಮಾರ್ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರಾಮತೀರ್ಥ ಬಳಿಯ ಹೆಲಿಪ್ಯಾಡ್’ಗೆ ಬಂದಿಳಿದರು.
ಈ ವೇಳೆ ಹೆಲಿಪ್ಯಾಡ್’ನ ಬಳಿಯ ಹುಲ್ಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೆಲಿಕಾಪ್ಟರ್’ಗೆ ಸಿಗ್ನಲ್ ಕೊಡುವ ಸ್ಮೋಕ್ ಕ್ಯಾಂಡಲ್’ನಿಂದ ಬೆಂಕಿ ಆವರಿಸಿದೆ ಎನ್ನಲಾಗಿದೆ. ಹುಲ್ಲಿಗೆ ಹೊತ್ತಿಕೊಂಡ ಬೆಂಕಿಯನ್ನು ಕೂಡಲೇ ಸಿಬ್ಬಂದಿ ಆರಿಸಿದ್ದು, ಸಂಭಾವ್ಯ ದುರಂತ ತಪ್ಪಿದೆ.
ಮಂಗಳವಾರ ಡಿಕೆ ಶಿವಕುಮಾರ್ ಅವರು ಜಕ್ಕೂರು ವಿಮಾನ ನಿಲ್ದಾಣದಿಂದ ಮುಳಬಾಗಿಲಿಗೆ ತೆರಳುತ್ತಿದ್ದಾಗ ಹೆಲಿಕಾಪ್ಟರ್ಗೆ ಹದ್ದು ಡಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ಹೆಲಿಕಾಪ್ಟರ್ ಮುಂಭಾಗದ ಗಾಜು ಪುಡಿಪುಡಿಯಾಗಿತ್ತು. ಅದೃಷ್ಟವಶಾತ್ ಹೆಲಿಕಾಪ್ಟರ್ನಲ್ಲಿದ್ದವರಿಗೆ ಯಾವುದೇ ಹಾನಿಯಾಗಿಲ್ಲ.
ಚಾಮುಂಡೇಶ್ವರಿ ದೇವಿ ಮುಂದೆ ರುದ್ರಾಕ್ಷಿ ಜಪ ಮಾಡಿದ ಡಿಕೆಶಿ
ಹೊನ್ನಾವರಕ್ಕೆ ತೆರಳುವ ಮುನ್ನ ಡಿ.ಕೆ ಶಿವಕುಮಾರ್ ಚಾಮುಂಡಿ ಬೆಟ್ಟಕ್ಕೆ ತೆರಳಿ, ಚಾಮುಂಡೇಶ್ವರಿ ಸನ್ನಿಧಿಯಲ್ಲಿ 10 ನಿಮಿಷಗಳಿಗೂ ಹೆಚ್ಚು ಕಾಲ ರುದ್ರಾಕ್ಷಿ ಜಪ ಮಾಡಿದ್ದರು. ಬಳಿಕ ಗೋಪುರದ ಮುಂದೆ ಈಡುಗಾಯಿ ಸೇವೆ ನೆರವೇರಿಸಿದ್ದರು. ನಂತರ ಹೊನ್ನಾವರಕ್ಕೆ ಪ್ರಯಾಣಿಸಿದ್ದರು.