ಬೆಳಗಾವಿ : ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಗೌರವ ಧನ ಶೀಘ್ರವೇ ಹೆಚ್ಚಳ ಮಾಡೋದಾಗಿ ಸಚಿವ ರಹೀಂಖಾನ್ ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಸುನೀಲ್ ಗೌಡ ಪಾಟೀಲ್ ಪ್ರಶ್ನೆ ಕೇಳಿದರು.
ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಗೌರವ ಧನ ಹೆಚ್ಚಿಸಬೇಕು. ತಮಿಳುನಾಡು, ಮಹಾರಾಷ್ಟ್ರ, ಕೇರಳಾ ಸೇರಿ ಹಲವು ರಾಜ್ಯಗಳಲ್ಲಿ ಗೌರವ ಧನ ಜಾಸ್ತಿ ಇದೆ.
ಕಳೆದ 9 ವರ್ಷಗಳಿಂದ ಗೌರವ ಧನ ಜಾಸ್ತಿ ಮಾಡಿಲ್ಲ. 800, 1,200 ರೂ. ಗೌರವ ಧನ ಸಾಕಾಗುತ್ತದೆಯಾ? ಎರಡು ಬಾರಿ ನಾನು ಪ್ರಶ್ನೆ ಕೇಳಿದ್ರು ಸಮಸ್ಯೆ ಬಗೆಹರಿದಿಲ್ಲ. ಕೂಡಲೇ ಗೌರವ ಧನ ಜಾಸ್ತಿ ಮಾಡಿ ಎಂದು ಆಗ್ರಹಿಸಿದ್ದಾರೆ.
ಇದಕ್ಕೆ ಸಚಿವ ರಹೀಂಖಾನ್ ಉತ್ತರ ನೀಡಿ, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಗೌರವ ಧನ ಕಡಿಮೆ ಇದೆ. ಆರ್ಥಿಕ ಇಲಾಖೆ ಬಳಿ ಫೈಲ್ ರೆಡಿ ಇದೆ. ಗೌರವ ಧನ ಡಬಲ್ ಅಥವಾ ತ್ರಿಬಲ್ ಜಾಸ್ತಿ ಮಾಡೋ ಆಸೆ ಇದೆ. ಆರ್ಥಿಕ ಇಲಾಖೆ ಕೂಡಾ ಇದಕ್ಕೆ ಒಪ್ಪಿದೆ. ಆದಷ್ಟೂ ಬೇಗ ಗೌರವಧನ ಹೆಚ್ಚಳ ಮಾಡುವ ಕೆಲಸ ಮಾಡ್ತೀವಿ ಎಂದಿದ್ದಾರೆ.














