ಮನೆ ರಾಜ್ಯ ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧಿಸಲು ಪ್ರತ್ಯೇಕ ಕಾಯ್ದೆ ರೂಪಿಸಿ, ಜಾರಿಗೊಳಿಸಲು ನಿರ್ಧಾರ: ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧಿಸಲು ಪ್ರತ್ಯೇಕ ಕಾಯ್ದೆ ರೂಪಿಸಿ, ಜಾರಿಗೊಳಿಸಲು ನಿರ್ಧಾರ: ದಿನೇಶ್ ಗುಂಡೂರಾವ್

0

ಬೆಂಗಳೂರು: ರಾಜ್ಯದಲ್ಲಿ ಹುಕ್ಕಾ ಬಾರ್ ಗಳನ್ನು ನಿಷೇಧಿಸಲು ಕಾಯ್ದೆ ತರಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುವ ಹಾನಿ ತಡೆಗೆ ಸಂಬಂಧಿಸಿದಂತೆ ಇಂದು ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಯುವ ಸಬಲೀಕರಣ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆಯ ಬಳಿಕ ಅವರು ಪತ್ರಕರ್ತರ ಜೊತೆ ಮಾತನಾಡಿದರು.

ಹುಕ್ಕಾ ಬಾರ್ ಗಳ ನಿಷೇಧ ಅಗತ್ಯವಿದೆ ಎಂಬ ತೀರ್ಮಾನಕ್ಕೆ ಬಂದಿದ್ದೇವೆ. ಆದರೆ, ಪ್ರತ್ಯೇಕ ಕಾಯ್ದೆಯ ಬಲವಿಲ್ಲದೆ ನಿಷೇಧಿಸಿದರೆ ನ್ಯಾಯಾಲಯದಲ್ಲಿ ಸರ್ಕಾರಕ್ಕೆ ಹಿನ್ನಡೆ ಆಗುತ್ತದೆ. ಆದ್ದರಿಂದ ಹುಕ್ಕಾ ಬಾರ್ ನಿಷೇಧಿಸುವುದಕ್ಕಾಗಿ ಪ್ರತ್ಯೇಕ ಕಾಯ್ದೆ ರೂಪಿಸಿ, ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದರು.

ತಂಬಾಕು ಉತ್ಪನ್ನಗಳ ನಿಷೇಧಿತ ವಲಯವನ್ನು ವಿಸ್ತರಿಸುವುದಕ್ಕೂ ನಿರ್ಧರಿಸಲಾಗಿದೆ. ಆಸ್ಪತ್ರೆ, ದೇವಸ್ಥಾನ, ಮಸೀದಿ, ಚರ್ಚ್ ಆವರಣ ಹಾಗೂ ಸಮೀಪದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗುವುದು. ತಂಬಾಕು ಉತ್ಪನ್ನಗಳ ಖರೀದಿದಾರ ಕನಿಷ್ಠ ವಯಸ್ಸನ್ನು 18 ವರ್ಷಗಳಿಂದ 21 ವರ್ಷಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದರು.

ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಬಿ. ನಾಗೇಂದ್ರ ಮಾತನಾಡಿ ಯುವಜನರ ಒಳಿತಿಗಾಗಿ ಹುಕ್ಕಾ ಬಾರ್ ನಿಷೇಧಿಸಲು ತೀರ್ಮಾನಿಸಲಾಗಿದೆ. ಇದರಿಂದ ಒಳ್ಳೆಯದಾಗಲಿದೆ ಎಂದು ಹೇಳಿದರು.