ಹೊರನಾಡಿನ ಚೈತ್ರ ಮಾಸದಿಂದ ಪ್ರಾರಂಭಿಸಿ ಪಾಲ್ಗುಣ ಮಾಸದವರೆಗೆ ಹಲವು ಉತ್ಸವಗಳು ನಡೆಯುತ್ತವೆ. ಇದೆಲ್ಲವೂ ಮೂಲ ಕಾಶಿಯಲ್ಲಿ ನಡೆಯುವ ಸಂಪ್ರದಾಯವನ್ನೇ ಒಳಗೊಂಡಿದೆ.
ಪೂಜಾ ಕೈಂಕರ್ಯಗಳು ಅಲ್ಲಿಯ ಪರಂಪರೆಯಂತೆಯೇ ಮುಂದುವರಿಸಿಕೊಂಡು ಬಂದಿದೆ.ಚೈತ್ರದ ಚೈತ್ರ ಶುದ್ಧ ಪಾಂಡ್ಯ ದ್ವಿತೀಯ, ಸೃಷ್ಟಿ, ನವಮಿ, ದಶಮಿ, ಚೈತ್ರ ಬಹಳ ಅಮಾವಾಸ್ಯೆ ವೈಶಾಖ ಶುದ್ಧ ಪಾಡ್ಯದಿಂದ ಪಂಚಮಿಯವರೆಗೆ ಶ್ರೀ ಶಂಕರ ಜಯಂತಿ ಉತ್ಸವ ವೈಶಾಖ ಶುದ್ದ ತೃತೀಯಾ ಪಂಚಮಿ, ದ್ವಾದಶಿ, ಚತುರ್ದಶಿ, ವೈಶಾಖ ಬಹುಳ ಪಾಡ್ಯ, ಜೇಷ್ಠ ಶುದ್ಧ ದ್ವಿತೀಯ, ಕರ್ಕಾಟಕ ಸಂಕ್ರಮಣ ಆಷಾಢ ಶುದ್ದ ಏಕಾದಶಿ ಚಅತುರ್ಮಾಸ್ಯ ವತ್ರ, ವ್ಯಾಸ ಪೂಜೆ, ಗುರುಪೂರ್ಣಿಮೆ, ಶ್ರಾವಣ ಶುದ್ಧದ ದಿನಗಳು, ಬಹುಳದ ಅಷ್ಟಮಿ, ಭಾದ್ರಪದ ಶುದ್ಧ ತೃತೀಯ, ಚತುರ್ಥಿ, ನವಮಿ,ಏಕಾದಶಿ,ಚತುರ್ದಶಿ, ಹುಣ್ಣಿಮೆ, ಬಹಳ ಷಷ್ಠಿ ಅಮಾವಾಸ್ಯೆ ಹೀಗೆ ಪ್ರಾರಂಭವಾಗುವ ಕಾರ್ಯಕ್ರಮಗಳು ಅಶ್ವಯುಜ ಮಾಸದಲ್ಲಿ ವಿಶೇಷವಾಗಿ ರೂಪುಗೊಳ್ಳುತ್ತದೆ.
ಇಲ್ಲಿ ಹೊರನಾಡಿನಲ್ಲಿ ನಡೆಯುವ ಎಲ್ಲಾ ಉತ್ಸವಗಳಲ್ಲಿ ಶಿಖರ ಪ್ರಯಾಣವಾಗಿರುವಂತಹ ಉತ್ಸವ ಎಂದರೆ ನವರಾತ್ರಿ ಉತ್ಸವ ನವರಾತ್ರಿ ಎಂಬುದು ಒಂಬತ್ತು ರಾತ್ರಿಗಳಲ್ಲಿ ನಡೆಯುವ ಸಂಭ್ರಮ ಆಚರಣೆಯ ಪ್ರತೀಕ.ಮಧು, ಕೈಟಭ ಶುಂಭ ನಿಶುಂಬ, ಮಹಿಷಾಸುರ ಮೊದಲಾದ ಲೋಕಕಂಟಕರಾದ ಮಹಾ ರಾಕ್ಷಸರನ್ನು ಕೊಂದ ಜಗನ್ಮಾತೆಯನ್ನು ಈ ನವರಾತ್ರಿಯಲ್ಲಿ ವಿಶೇಷವಾಗಿ ಪೂಜೆಸಲ್ಲಿಸಲಾಗುವುದು.ಶರತ್ಕಾಲದಲ್ಲಿ ಆಕೆಗೆ ವಿಶೇಷ ಪೂಜೆ ಮಾಡುವುದರ ಮೂಲಕ ಈ ದೇವಿಯ ಮಹಾತ್ಮೆಯನ್ನು ಕೊಂಡಾಡುವುದರ ಮೂಲಕ ದೇವಿಗೆ ಸಂತುಪ್ತಿಯನ್ನು ಉಂಟುಮಾಡುವುದರ ಮೂಲಕ ಅವಳಿಂದ ಸಕಲ ಸೌಭಾಗ್ಯವನ್ನು ಪಡೆಯಲು ಇದು ಪ್ರಮುಖ ಆಚರಣೆ ಎನಿಸಿಕೊಳ್ಳುತ್ತದೆ.ಹೊರನಾಡಿನಲ್ಲಿ ನಡೆಯುವ ನವರಾತ್ರಿ ಉತ್ಸವ ತನ್ನದೇ ಆದ ವೈಶಿಷ್ಟ್ಯವನ್ನು ಪಡೆದುಕೊಂಡಿದೆ.ಧಾರ್ಮಿಕ,ಸಾಂಸ್ಕೃತಿಕ ಮೊದಲಾದ ಕಾರ್ಯಕ್ರಮಗಳು ಈ 9 ದಿನಗಳಲ್ಲಿ ವಿಶೇಷವಾಗಿ ನಡೆಯುತ್ತದೆ ಆ ದಿನಗಳಲ್ಲಿ ಅನ್ನಪೂರ್ಣಯನ್ನು ಆಭರಣವನ್ನು ತೊಡಿಸುವುದರ ಮೂಲಕ ಅಲಂಕರಿಸಿ ಪೂಜಿಸಲಾಗುತ್ತದೆ.
ನವರಾತ್ರಿಯ ಹಿಂದಿನ ದಿನ ಅಂದರೆ ಭಾದ್ರಪದ ಬಹುಳ ಅಮಾವಾಸ್ಯೆಯಂದು ಶ್ರೀ ಅಮ್ಮನವರಿಗೆ ಮಹಾಭಿಷೇಕ ಮಾಡಲಾಗುತ್ತದೆ.ವೇದ ಘೋಷಗಳೊಂದಿಗೆ ಅಂದು ಒಂದು 1008 ಶ್ರೀ ಸೂಕ್ತ ಪಠನ ಮಾಡುವುದರ ಮೂಲಕ ಅಭಿಷೇಕ ಮಾಡಲಾಗುತ್ತದೆ.ಜಗತ್ಪ್ರಸೂತಿಕ ಎಂಬ ಅಲಂಕಾರ ಅಂದು ಅಮ್ಮನವರಿಗೆ ಮಾಡಲಾಗುತ್ತದೆ.ಅಂದರೆ ತಾಯಿ ತನ್ನ ತೊಡೆಯ ಮೇಲೆ ಮುದ್ದಾದ ಮಗುವನ್ನು ಮಲಗಿಸಿಕೊಂಡು ಈ ಜಗತ್ತಿನ ಸೃಷ್ಟಿಗೆ ನಾನೇ ತಾಯಿ. ನೀನು ಮಗುವಿನಂತೆ ಎಂಬುದಾಗಿ ಹೇಳುತ್ತಿದ್ದಳೋ ಎಂಬಂತೆ ಈ ಅಲಂಕಾರ ಇರುತ್ತದೆ. ಸುಂದರವಾಗಿರುವ ಈ ಅಲಂಕಾರ ಮರುದಿನದ ನವರಾತ್ರಿ ಉತ್ಸವಕ್ಕೆ ನಾಂದಿಯಾಗಿರುತ್ತದೆ. ಅಂದಿನಿಂದ ಪ್ರತಿದಿನ ಒಂದೊಂದು ಅಲಂಕಾರವನ್ನು ಶ್ರೀದೇವಿಗೆ ಮಾಡಲಾಗಿರುತ್ತದೆ.