ಮಂಗಳೂರು: ಮಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸ್ಕೂಟರ್ ಪಲ್ಟಿಯಾಗಿ ರಸ್ತೆಗೆ ಬಿದ್ದ ಇಬ್ಬರು ಸವಾರರಲ್ಲಿ ಒಬ್ಬರು ಸಾವನ್ನಪ್ಪಿದ ಭೀಕರ ಘಟನೆ ನಡೆದಿದೆ. ಬೈಕಂಪಾಡಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಈ ದುರ್ಘಟನೆಯಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಂಗಳೂರು ನಗರದಿಂದ ಸುರತ್ಕಲ್ ಕಡೆಗೆ ಸಾಗುತ್ತಿದ್ದ ಸ್ಕೂಟರ್ ಬೈಕಂಪಾಡಿ ಸಮೀಪದ ಹೆದ್ದಾರಿಯ ಹೊಂಡಕ್ಕೆ ಸಿಲುಕಿ ಪಲ್ಟಿಯಾಗಿದೆ. ಈ ಸಂದರ್ಭದಲ್ಲಿ ಸವಾರರಾದ ಅಶ್ರಫ್ (36) ಮತ್ತು ಶಾಹಿಲ್ (35) ರಸ್ತೆ ಮೇಲೆ ಬಿದ್ದಿದ್ದು, ಪಕ್ಕದಿಂದ ವೇಗವಾಗಿ ಬಂದ ಟ್ಯಾಂಕರ್ ನೇರವಾಗಿ ಅಶ್ರಫ್ ಅವರ ಮೇಲೆ ಹರಿದಿದೆ. ಈ ಭೀಕರ ದೃಶ್ಯ ಸ್ಥಳೀಯರ ಬೆಚ್ಚಿಬೀಳುವಂತಿತ್ತು.
ಅಶ್ರಫ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಶಾಹಿಲ್ ಗಂಭೀರ ಗಾಯಗಳೊಂದಿಗೆ ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಮೂಲ್ಕಿಯ ನಿವಾಸಿಯಾಗಿದ್ದಾರೆ.
ಮೃತ ಅಶ್ರಫ್ ಸುರತ್ಕಲ್ ಸಮೀಪದ ಆಶ್ರಯ ಕಾಲನಿಯಲ್ಲಿ ವಾಸವಾಗಿದ್ದವರು. ಹೂ ವ್ಯಾಪಾರ ಮತ್ತು ಹೊಟೇಲ್ ವ್ಯವಹಾರ ನಡೆಸುತ್ತಿದ್ದ ಅವರು ಜನರಲ್ಲಿ ಉತ್ತಮ ಪರಿಚಯ ಹೊಂದಿದ್ದರು. ಕೊರೊನಾ ಮಹಾಮಾರಿ ಸಂದರ್ಭದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಆಹಾರ ಕಿಟ್ ವಿತರಣೆ, ತುರ್ತು ಸಹಾಯಕರಾಗಿ ಹಲವರಿಗೆ ನೆರವಾಗಿದ್ದರು ಎಂಬುದು ನೆನೆಸಿಕೊಳ್ಳುವಂತಹ ವಿಷಯವಾಗಿದೆ.
ಅಪಘಾತ ಸಂಭವಿಸಲು ಮುಖ್ಯ ಕಾರಣವಾಗಿದ್ದು, ಹೆದ್ದಾರಿಯಲ್ಲಿರುವ ನಿರ್ವಹಣೆಯಾಗದ ಹೊಂಡಗಳು. ಈ ಘಟನೆ ಮತ್ತೆ ರಸ್ತೆ ಸುರಕ್ಷತೆ ಮತ್ತು ನಿರ್ವಹಣೆಯ ಮೇಲೆ ಪ್ರಶ್ನೆ ಎಬ್ಬಿಸಿದೆ. ಸಾರ್ವಜನಿಕರು ಮತ್ತು ಸ್ಥಳೀಯ ಮುಖಂಡರು ರಾಷ್ಟ್ರೀಯ ಹೆದ್ದಾರಿಗಳ ದುರಸ್ಥಿಗೆ ಸಂಬಂಧಪಟ್ಟ ಇಲಾಖೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ಟ್ಯಾಂಕರ್ ಚಾಲಕನನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆ.














