ಮನೆ ಅಪರಾಧ ಭೀಕರ ರಸ್ತೆ ಅಪಘಾತ – ಐವರು ಸ್ಥಳದಲ್ಲೇ ಸಾವು..!

ಭೀಕರ ರಸ್ತೆ ಅಪಘಾತ – ಐವರು ಸ್ಥಳದಲ್ಲೇ ಸಾವು..!

0

ಪಾಟ್ನಾ : ಪರ್ಸಾ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತಕ್ಕೆ ಐವರು ಉದ್ಯಮಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಪಾಟ್ನಾ-ಗಯಾ-ದೋಭಿ ಚತುಷ್ಪಥ ರಸ್ತೆಯಲ್ಲಿ ಘಟನೆ ನಡೆದಿದೆ. ಮೃತ ಉದ್ಯಮಿಗಳನ್ನು ರಾಜೇಶ್ ಕುಮಾರ್ (50), ಸಂಜಯ್ ಸಿಂಗ್ (55), ಕಮಲ್ ಕಿಶೋರ್ (38), ಪ್ರಕಾಶ್ ಚೌರಾಸಿಯಾ (35) ಮತ್ತು ಸುನಿಲ್ ಕುಮಾರ್ (38) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಪಾಟ್ನಾದ ಪ್ರತಿಷ್ಠಿತ ಉದ್ಯಮಿಗಳಾಗಿದ್ದು, ಫತುಹಾದಿಂದ ತಡರಾತ್ರಿ ಕೆಲವು ಕೆಲಸ ಮುಗಿಸಿ ಪಾಟ್ನಾಕ್ಕೆ ಹಿಂತಿರುಗುತ್ತಿದ್ದರು ಎಂದು ತಿಳಿದುಬಂದಿದೆ.

ಫತುಹಾದಿಂದ ಪಾಟ್ನಾಗೆ ಹಿಂತಿರುಗುತ್ತಿದ್ದ ವೇಳೆ ಕಾರು ರಸ್ತೆಯಲ್ಲಿ ನಿಂತಿದ್ದ ಟ್ರಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿತ್ತು, ಅರ್ಧ ಕಾರು ಟ್ರಕ್‌ ಕೆಳಗೆ ನುಗ್ಗಿದೆ. ಇದರಿಂದಾಗಿ ಕಾರಿನಲ್ಲಿದ್ದ, ಎಲ್ಲಾ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪರ್ಸಾ ಬಜಾರ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸಾಕಷ್ಟು ಹರಸಾಹಸದ ಬಳಿಕ ಪೊಲೀಸರು ಕಾರನ್ನು ತುಂಡು ಮಾಡಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಈ ಪ್ರಕರಣದ ತನಿಖೆ ನಡೆಯುತ್ತಿದೆ. ಇನ್ನು ಪ್ರಾಥಮಿಕ ಮೂಲಗಳ ಪ್ರಕಾರ ಅತಿವೇಗದ ಚಾಲನೆಯೇ ಕಾರಣ ಎಂದು ತಿಳಿದುಬಂದಿದೆ.