ಮನೆ ಕಾನೂನು ನವಜಾತ ಶಿಶುಗಳು ನಾಪತ್ತೆಯಾದರೆ ಆಸ್ಪತ್ರೆಯ ಪರವಾನಗಿ ರದ್ದು: ಸುಪ್ರೀಂ ಕೋರ್ಟ್ ಆದೇಶ

ನವಜಾತ ಶಿಶುಗಳು ನಾಪತ್ತೆಯಾದರೆ ಆಸ್ಪತ್ರೆಯ ಪರವಾನಗಿ ರದ್ದು: ಸುಪ್ರೀಂ ಕೋರ್ಟ್ ಆದೇಶ

0

ನವದೆಹಲಿ : ಮಕ್ಕಳ ಕಳ್ಳಸಾಗಣೆ ಪ್ರಕರಣಗಳಿಗೆ ಸಂಬಂಧಿಸಿ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಇನ್ನು ಮುಂದೆ ಆಸ್ಪತ್ರೆಯಿಂದ ನವಜಾತ ಶಿಶುಗಳು ಕಾಣೆಯಾದರೆ, ಮೊದಲು ಆ ಆಸ್ಪತ್ರೆಯ ಪರವಾನಗಿ ರದ್ದುಗೊಳಿಸುವಂತೆ ಹೇಳಿದೆ. ಮಕ್ಕಳ ಕಳ್ಳಸಾಗಣೆ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಮಕ್ಕಳ ಕಳ್ಳಸಾಗಣೆ ಪ್ರಕರಣದ ಆರೋಪಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜೆ.ಬಿ.ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್.ಮಹಾದೇವನ್ ಅವರ ನ್ಯಾಯಪೀಠ ವಿಚಾರಣೆ ನಡೆಸಿತು.

ಪ್ರಕರಣದಲ್ಲಿ ಜಾಮೀನು ನೀಡಿದ ಅಲಹಾಬಾದ್ ಹೈಕೋರ್ಟ್ ಅನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ಜಾಮೀನು ಅರ್ಜಿಗಳನ್ನು ನಿರ್ಲಕ್ಷ್ಯದಿಂದ ನಿರ್ವಹಿಸಲಾಗಿದೆ. ಇದರಿಂದಾಗಿ ಈಗ ಹಲವು ಆರೋಪಿಗಳು ನಾಪತ್ತೆಯಾಗಿದ್ದಾರೆ. ಇಂಥ ಆರೋಪಿಗಳು ಸಮಾಜಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತಾರೆ. ಜಾಮೀನು ನೀಡುವಾಗ ಉಚ್ಚ ನ್ಯಾಯಾಲಯವು ಕನಿಷ್ಠ ಪಕ್ಷ ಪ್ರತಿ ವಾರ ಪೊಲೀಸ್ ಠಾಣೆಗೆ ಬಂದು ಹಾಜರಾತಿಯನ್ನು ದೃಢೀಕರಿಸುವ ಷರತ್ತನ್ನು ವಿಧಿಸಬೇಕಾಗಿತ್ತು. ಈಗ ಆರೋಪಿಗಳ ಜಾಡು ಹಿಡಿಯುವುದೇ ಪೊಲೀಸರಿಗೆ ಕಷ್ಟವಾಗಿದೆ ಎಂದು ಹೇಳಿದೆ.

ಇದೇ ವೇಳೆ ಉತ್ತರ ಪ್ರದೇಶ ಸರ್ಕಾರ ಈ ವಿಷಯವನ್ನು ನಿಭಾಯಿಸಿದ ರೀತಿಯ ಬಗ್ಗೆಯೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, “ಜಾಮೀನು ಆದೇಶ ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರ ಯಾವುದೇ ಅರ್ಜಿಯನ್ನೂ ಸಲ್ಲಿಸಿಲ್ಲ. ಈ ವಿಚಾರದಲ್ಲಿ ಯಾವುದೇ ಗಂಭೀರತೆಯನ್ನು ತೋರಿಸಿಲ್ಲ. ಆರೋಪಿಗೆ ಗಂಡು ಮಗು ಬೇಕಿತ್ತು. ಅದಕ್ಕೆ ಆತ 4 ಲಕ್ಷ ರೂಪಾಯಿ ಕೊಟ್ಟು ಮಗುವನ್ನು ಖರೀದಿಸಿದ್ದಾನೆ. ನಿಮಗೆ ಮಗು ಬೇಕು ಎಂದು, ಕಳ್ಳಸಾಗಣೆಯಾದ ಮಗುವನ್ನು ಪಡೆಯುವುದು ಎಷ್ಟು ಸರಿ? ಮಗುವನ್ನು ಕಳವು ಮಾಡಲಾಗಿತ್ತು ಎಂದು ಆತನಿಗೆ ತಿಳಿದಿತ್ತಲ್ಲವೇ” ಎಂದೂ ನ್ಯಾ.ಪರ್ದಿವಾಲಾ ಪ್ರಶ್ನಿಸಿದ್ದಾರೆ.

ಎಲ್ಲ ಆರೋಪಿಗಳೂ ನ್ಯಾಯಾಲಯದ ಮುಂದೆ ಶರಣಾಗಬೇಕು. ಅವರೆಲ್ಲರನ್ನೂ ನ್ಯಾಯಾಂಗ ವಶದಲ್ಲಿರಬೇಕು ಎಂದ ನ್ಯಾಯಪೀಠ, “ಒಂದು ವಾರದೊಳಗೆ ಆರೋಪ ನಿಗದಿಪಡಿಸುವ ಪ್ರಕ್ರಿಯೆ ನಡೆಸಲಾಗುವುದು. ಕೆಲವು ಆರೋಪಿಗಳು ಪರಾರಿಯಾಗಿರುವುದು ಹೌದಾದರೆ, ವಿಚಾರಣಾ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಲಿ. ಯಾರು ಹಾಜರಿದ್ದಾರೋ ಅವರ ವಿಚಾರಣೆ ಮುಂದುವರಿಯಲಿ. ಇದರಲ್ಲಿ ಯಾವುದೇ ವಿಳಂಬ ಸಲ್ಲದು” ಎಂದೂ ನ್ಯಾಯಾಲಯ ಹೇಳಿದೆ.

ಕೋರ್ಟ್​ ಹೊರಡಿಸಿದ ಮಾರ್ಗಸೂಚಿಗಳೇನು?

ಮಕ್ಕಳ ಕಳ್ಳಸಾಗಣೆಯನ್ನು ನಿಭಾಯಿಸುವ ಬಗ್ಗೆ ವಿಸ್ತೃತ ಮಾರ್ಗಸೂಚಿಗಳನ್ನೂ ಇದೇ ಸಂದರ್ಭದಲ್ಲಿ ನ್ಯಾಯಪೀಠ ನೀಡಿತು. ಅವುಗಳನ್ನು ಶೀಘ್ರವಾಗಿ ಜಾರಿಗೆ ತರುವಂತೆ ನ್ಯಾಯಮೂರ್ತಿ ಪರ್ದಿವಾಲಾ ಅವರು ರಾಜ್ಯ ಸರ್ಕಾರಗಳಿಗೆ ಸೂಚಿಸಿದರು. “ಮಕ್ಕಳ ಕಳ್ಳಸಾಗಣೆ ಪ್ರಕರಣಗಳಲ್ಲಿ ಬಾಕಿ ಇರುವ ಕೇಸುಗಳ ವಿಚಾರಣೆಗಳ ಸ್ಥಿತಿಗತಿಯನ್ನು ದೇಶಾದ್ಯಂತದ ಎಲ್ಲ ಹೈಕೋರ್ಟ್‌ಗಳೂ ಪರಿಶೀಲಿಸಬೇಕು. ನಿರ್ದೇಶನಗಳನ್ನು ಜಾರಿಗೆ ತರುವಲ್ಲಿ ತೋರುವ ಯಾವುದೇ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಅದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುವುದು” ಎಂದು ನ್ಯಾಯಾಲಯ ಹೇಳಿದೆ.

ಪೋಷಕರು ತಮ್ಮ ಮಕ್ಕಳ ಬಗ್ಗೆ ಜಾಗರೂಕರಾಗಿರಬೇಕು. “ಮಗು ಮೃತಪಟ್ಟಾಗ ಪೋಷಕರಿಗೆ ಆಗುವ ನೋವು, ಪಡುವ ಯಾತನೆಗೂ, ಮಗುವು ಕಳ್ಳಸಾಗಣೆ ಗ್ಯಾಂಗ್‌ಗಳ ಪಾಲಾದಾಗ ಆಗುವ ಯಾತನೆಗೂ ವ್ಯತ್ಯಾಸವಿದೆ. ಮಗು ಸತ್ತಾಗ ಅದು ಭಗವಂತನ ಮಡಿಲು ಸೇರಿತು ಎಂದು ಭಾವಿಸಬಹುದು. ಆದರೆ, ಅದು ಕಳ್ಳಸಾಗಣೆದಾರರ ಕೈಯ್ಯಲ್ಲಿ ನಲುಗುತ್ತಿದೆ ಎಂದಾಗ ಆಗುವ ಯಾತನೆ ಅಷ್ಟಿಷ್ಟಲ್ಲ” ಎಂದೂ ನ್ಯಾಯಪೀಠ ಹೇಳಿತು.

ಯಾವುದೇ ಆಸ್ಪತ್ರೆಯಲ್ಲಿ ನವಜಾತ ಶಿಶು ಕಾಣೆಯಾದರೆ, ಕೂಡಲೇ ಆ ಆಸ್ಪತ್ರೆಯ ಪರವಾನಗಿಯನ್ನು ರದ್ದು ಮಾಡಬೇಕು. “ಆಸ್ಪತ್ರೆಯಿಂದ ಯಾವುದೇ ನವಜಾತ ಶಿಶುವನ್ನು ಕಳ್ಳಸಾಗಣೆ ಮಾಡಿದರೆ, ಅಂತಹ ಆಸ್ಪತ್ರೆಗಳ ಪರವಾನಗಿಯನ್ನು ಅಮಾನತುಗೊಳಿಸುವುದು ಮೊದಲ ಹೆಜ್ಜೆಯಾಗಿರಬೇಕು” ಎಂದು ನ್ಯಾಯಮೂರ್ತಿ ಪರ್ದಿವಾಲಾ ಹೇಳಿದರು.

ಭಾರತದಲ್ಲಿ ಪ್ರತಿ ವರ್ಷ ಮಕ್ಕಳ ಕಳ್ಳಸಾಗಣೆಯ ಸುಮಾರು 2,000 ಪ್ರಕರಣಗಳು ವರದಿಯಾಗುತ್ತವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿಯ ಪ್ರಕಾರ, 2022 ರಲ್ಲಿ ಇಂತಹ 2250 ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಹೆಚ್ಚಿನ ಪ್ರಕರಣಗಳು ತೆಲಂಗಾಣ, ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ನಡೆದಿವೆ.