ಮನೆ ರಾಜ್ಯ ಆಸ್ಪತ್ರೆ ಮೇಲ್ಛಾವಣಿ ಕುಸಿತ ಪ್ರಕರಣ: ಗಾಯಗೊಂಡಿದ್ದವರ ಪೈಕಿ ಓರ್ವನ ಸಾವು

ಆಸ್ಪತ್ರೆ ಮೇಲ್ಛಾವಣಿ ಕುಸಿತ ಪ್ರಕರಣ: ಗಾಯಗೊಂಡಿದ್ದವರ ಪೈಕಿ ಓರ್ವನ ಸಾವು

0

ಬೆಂಗಳೂರು (Bengaluru)- ಮೇಲ್ಛಾವಣಿ ಕುಸಿತದಿಂದ ಗಾಯಗೊಂಡಿದ್ದ ನಾಲ್ವರು ಕಾರ್ಮಿಕರ ಪೈಕಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆಂದು ಬುಧವಾರ ತಿಳಿದುಬಂದಿದೆ. 

ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಬಸವರಾಜು (23) ಮೃತ ದುರ್ದೈವಿ. ಘಟನೆಯಲ್ಲಿ ಗಾಯಗೊಂಡಿರುವ ಮೊಯೀವುದ್ದೀನ್, ಚಾಂದ್ ಪಾಷಾ ಹಾಗೂ ರಫೀಸಾಬ್ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ನಗರದ ನೃಪತುಂಬ ರಸ್ತೆಯ ಸೇಂಟ್ ಮಾರ್ಥಾಸ್ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣ ಹಂತದ ಮೇಲ್ಛಾವಣಿ ಕುಸಿದಿತ್ತು. ಮೇಲ್ಚಾವಣಿಯಲ್ಲಿ ನೀರು ಸೋರಿಕೆ ತಡೆ ಕಾಮಗಾರಿಯಲ್ಲಿ ಕಾರ್ಮಿಕರು ನಿರತರಾಗಿದ್ದಾಗ ಈ ದುರ್ಘಟನೆ ಸಂಭವಿಸಿತ್ತು.

ಸೇಂಟ್ ಮಾರ್ಥಾಸ್ ಆಸ್ಪತ್ರೆಯ ಹೊರ ರೋಗಿಗಳ ವಿಭಾಗದ ಮುಂದೆ 20 ಅಡಿ ಅಗಲ ಹಾಗೂ 30 ಅಡಿ ಎತ್ತರದ ಮೇಲ್ಛಾವಣಿಯನ್ನು ಆಸ್ಪತ್ರೆಯ ಆಡಳಿತ ಮಂಡಳಿ ನಿರ್ಮಿಸುತ್ತಿದ್ದು, ಎರಡು ತಿಂಗಳಿಂದ ಇಲ್ಲಿ ಐವರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಕೆಲಸಕ್ಕೆ ಬಂದ ನಾಲ್ವರು ಕಾರ್ಮಿಕರು ನೆಲದಿಂದ ಸಿಮೆಂಟ್ ಮೂಟೆಗಳನ್ನು ಛಾವಣಿಗೆ ಸಾಗಿಸುತ್ತಿದ್ದರು. ಮತ್ತೊಬ್ಬ ಕೆಲಸಗಾರ ರಾಜಾ ಭಕ್ಷ ಕೆಳಗೆ ನಿಂತಿದ್ದ. ಈ ವೇಳೆ ಏಕಾಏಕಿ ಛಾವಣಿ ಕುಸಿದು ಬಿದ್ದಿದೆ. ಕೂಡಲೇ ಸಾರ್ವಜನಿಕರು, ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕರ ರಕ್ಷಣೆಗೆ ಧಾವಿಸಿದ್ದಾರೆ. 

ವಿಷಯ ತಿಳಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡು ಕಾರ್ಮಿಕರನ್ನು ರಕ್ಷಿಸಿದ್ದರು. ಗಾಯಗೊಂಡಿದ್ದ ಕಾರ್ಮಿಕರನ್ನು ಅದೇ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬಸವರಾಜು ಅವರು ಸಾವನ್ನಪ್ಪಿದ್ದಾರೆ. ಇನ್ನುಳಿದ ಮೂವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ.

ಘಟನೆ ಸಂಬಂಧ ಗುತ್ತಿಗೆದಾರ ಹಾಗೂ ಎಂಜಿನಿಯರ್ ವಿರುದ್ಧ ನಿರ್ಲಕ್ಷ್ಯತನ ಆರೋಪದಡಿ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬದುಕುಳಿದಿರುವ ಮೂವರ ಪೈಕಿ ಓರ್ವ ಕಾರ್ಮಿಕನ ಹೇಳಿಕೆಯನ್ನು ಆಧರಿಸಿ ಐಪಿಸಿ ಸೆಕ್ಷನ್ 337 ಮತ್ತು 338 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಓರ್ವ ಕಾರ್ಮಿಕ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸೆಕ್ಷನ್ 304ಎ ನ್ನು ದಾಖಲಿಸಲಾಗಿದೆ.

ಹಿಂದಿನ ಲೇಖನಜೂನ್‌ 1ರ ಹವಾಮಾನ ವರದಿ
ಮುಂದಿನ ಲೇಖನಖಾಸಗಿ ದೂರು ಸಲ್ಲಿಸುವಲ್ಲಿನ ವಿಳಂಬ ಕ್ಷಮಿಸಲು ಸಾಧ್ಯವಿಲ್ಲ: ಕರ್ನಾಟಕ ಹೈಕೋರ್ಟ್