‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ತಂಡ ಕೂಡ ಹೊಸತನವನ್ನು ಪ್ರೇಕ್ಷಕರಿಗೆ ಪರಿಚಯಿಸಿದೆ. ಮೇಕಿಂಗ್ ವಿಚಾರದಲ್ಲಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರ ತುಂಬ ಡಿಫರೆಂಟ್ ಆಗಿದೆ. ಸಿಕ್ಕಾಪಟ್ಟೆ ತರಲೆ, ತಮಾಷೆಯ ಮೂಲಕವೇ ಇಡೀ ಸಿನಿಮಾವನ್ನು ಕಟ್ಟಿಕೊಡಲಾಗಿದೆ.
ರಮ್ಯಾ, ದಿಗಂತ್ ಮುಂತಾದ ಸ್ಟಾರ್ ಕಲಾವಿದರ ಗೆಸ್ಟ್ ಅಪಿಯರೆನ್ಸ್ ಕಾರಣದಿಂದ ಚಿತ್ರಕ್ಕೆ ಇನ್ನಷ್ಟು ಪ್ರಚಾರ ಸಿಕ್ಕಿದೆ.
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲಿ ಯಾವುದೂ ಹೆಚ್ಚಲ್ಲ, ಕಡಿಮೆ ಅಲ್ಲ. ಸನ್ನಿವೇಶಕ್ಕೆ ತಕ್ಕಂತೆ ಎಲ್ಲ ಪಾತ್ರಗಳಿಗೂ ಸ್ಕ್ರೀನ್ ಸ್ಪೇಸ್ ಸಿಕ್ಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇಡೀ ಸನ್ನಿವೇಶವೇ ಒಂದು ಪಾತ್ರವಾಗಿ ನೋಡುಗರನ್ನು ಸೆಳೆಯುತ್ತದೆ.
ಒಂದು ಬಾಯ್ಸ್ ಹಾಸ್ಟೆಲ್. ಅಲ್ಲಿ ತುಂಬಿಕೊಂಡಿರುವ ಎಲ್ಲ ಹುಡುಗರು ಶುದ್ಧ ತರಲೆಗಳು. ಅವರನ್ನು ನಿಯಂತ್ರಿಸಲು ಓರ್ವ ಕಟ್ಟುನಿಟ್ಟಾದ ವಾರ್ಡನ್. ಹುಡುಗರು ಮತ್ತು ವಾರ್ಡನ್ ನಡುವಿನ ಕಿತ್ತಾಟವೇ ಈ ಚಿತ್ರದ ಕಥಾಹಂದರ. ಏನೋ ಮಾಡಲು ಹೋಗಿ ವಾರ್ಡನ್ ಜೀವಕ್ಕೆ ಕುತ್ತುಬರುವಂತಹ ಘಟನೆ ನಡೆಯುತ್ತದೆ. ಆ ಸಂಕಷ್ಟದಿಂದ ಹೊರಬರಲು ಹಾಸ್ಟೆಲ್ ಹುಡುಗರು ಹತ್ತಾರು ಕಸರತ್ತು ಮಾಡುತ್ತಾರೆ. ಆ ಸನ್ನಿವೇಶಗಳೇ ಇಲ್ಲಿ ಪ್ರೇಕ್ಷಕರಿಗೆ ನಗು ಉಕ್ಕಿಸುತ್ತವೆ. ಅಲ್ಲಲ್ಲಿ ಬರುವ ಟ್ವಿಸ್ಟ್ ಗಳಿಂದ ಮನರಂಜನೆಯ ಮಟ್ಟ ಹೆಚ್ಚಿದೆ.
ಹಾಸ್ಟೆಲ್ ಹುಡುಗರು ಮಾಡಿದ್ದೆಲ್ಲವೂ ಚೆನ್ನಾಗಿದೆಯೇ? ಹಾಗೇನೂ ಇಲ್ಲ. ಅವರ ತರಲೆ-ತಮಾಷೆಯನ್ನು ಒಪ್ಪಿಕೊಂಡರೆ ಮಾತ್ರ ಅದು ಫನ್ ಎನಿಸುತ್ತದೆ. ಒಪ್ಪಿಕೊಳ್ಳದೇ ಇದ್ದರೆ ಕಿರಿಕಿರಿ ಎನಿಸುವ ಸಾಧ್ಯತೆ ಇದೆ. ನೋಡುಗರು ಹೇಗೆ ಸ್ವೀಕರಿಸುತ್ತಾರೆ ಎಂಬುದರ ಮೇಲೆ ಎಲ್ಲವೂ ನಿಂತಿದೆ. ಹೆಚ್ಚೇನೂ ಜವಾಬ್ದಾರಿ ಇಲ್ಲದ ಹುಡುಗರು ಹೇಗೆ ಬೇಕೋ ಹಾಗೆ ವರ್ತಿಸುತ್ತಾರೆ. ಅದೇ ರೀತಿ ಸಿನಿಮಾ ಕೂಡ ಕೆಲವೊಮ್ಮೆ ಎತ್ತೆತ್ತಲೋ ಸಾಗುತ್ತದೆ. ಅದರ ಹಿಂದೆ ಪ್ರೇಕ್ಷಕನೂ ಸುತ್ತಬೇಕು. ಕ್ಲೈಮ್ಯಾಕ್ಸ್ ನಲ್ಲಿ ಏನಾಗಲಿದೆ ಎಂಬ ಕೌತುಕವಂತೂ ಕೊನೆವರೆಗೂ ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತದೆ.
ಆರಂಭದಲ್ಲೇ ಕಾಣಿಸಿಕೊಳ್ಳುವ ರಮ್ಯಾ ಅವರು ನಂತರ ಮಾಯವಾಗುತ್ತಾರೆ. ಮತ್ತೆ ಅವರು ಪ್ರತ್ಯಕ್ಷ ಆಗುವುದೇ ದ್ವಿತಿಯಾರ್ಧದಲ್ಲಿ. ಇದಕ್ಕೆಲ್ಲ ಕಾರಣ ಆಗುವುದು ದಿಗಂತ್ ಮಂಚಾಲೆ ಪಾತ್ರ. ಒಂದಷ್ಟು ದೃಶ್ಯಗಳು ಎಳೆದಾಡಿದಂತಿವೆ. ಲಾಜಿಕ್ ಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಸಿನಿಮಾ ನೋಡಿದರೆ ಇನ್ನಷ್ಟು ಇಷ್ಟ ಆಗುತ್ತದೆ. ಪೂರ್ತಿ ಸಿನಿಮಾದ ಕಥೆ ಒಂದೇ ಲೊಕೇಷನ್ ನಲ್ಲಿ, ಒಂದೇ ರಾತ್ರಿಯಲ್ಲಿ ಸಾಗುತ್ತದೆ. ಅದರಿಂದ ಕೊಂಚ ಏಕತಾನತೆ ಕಾಡುತ್ತದೆ. ಆದರೆ ಪಟಪಟನೆ ಸಾಗುವ ದೃಶ್ಯಗಳಿಂದ ಈ ಚಿತ್ರಕ್ಕೆ ನೋಡಿಸಿಕೊಂಡು ಹೋಗುವ ಗುಣ ಇದೆ.
ಇಡೀ ಸಿನಿಮಾದಲ್ಲಿ ಛಾಯಾಗ್ರಹಣವೇ ಹೈಲೈಟ್. ಬಹುತೇಕ ದೃಶ್ಯಗಳು ಸೆರೆಯಾಗುವುದೇ ಹಾಸ್ಟೆಲ್ ಹುಡುಗನ ಹ್ಯಾಂಡಿ ಕ್ಯಾಮ್ ಮೂಲಕ. ಅದನ್ನು ನೈಜ ಎಂಬ ರೀತಿಯಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ ಛಾಯಾಗ್ರಹಕ ಅರವಿಂದ್ ಎಸ್. ಕಶ್ಯಪ್.
ಅಜನೀಶ್ ಲೋಕನಾಥ್ ಅವರು ಸಂಗೀತದಿಂದ ಹಾಸ್ಟೆಲ್ ಹುಡುಗರಿಗೆ ಬಲ ತುಂಬಿದ್ದಾರೆ. ಎಲ್ಲ ಕಲಾವಿದರ ನಟನೆ ಚೆನ್ನಾಗಿದೆ. ವಾರ್ಡನ್ ಪಾತ್ರ ಮಾಡಿದ ಮಂಜುನಾಥ್ ನಾಯಕ್ ಗಮನ ಸೆಳೆಯುತ್ತಾರೆ.