ಮನೆ ಸುದ್ದಿ ಜಾಲ ಆಶ್ರಯ ಯೋಜನೆಯಡಿ ಸಿಗದ ಮನೆ: ಪ್ರತಿಭಟನೆಗೆ ಸಿಗದ ಅವಕಾಶ, ಭಿತ್ತಿ ಪತ್ರ ಹಂಚಿಕೆ

ಆಶ್ರಯ ಯೋಜನೆಯಡಿ ಸಿಗದ ಮನೆ: ಪ್ರತಿಭಟನೆಗೆ ಸಿಗದ ಅವಕಾಶ, ಭಿತ್ತಿ ಪತ್ರ ಹಂಚಿಕೆ

0

ಮೈಸೂರು: ಆಶ್ರಯ ಯೋಜನೆಯಡಿ ಮನೆ ಹಾಗೂ ನಿವೇಶನಕ್ಕೆ ಅರ್ಜಿ ಸಲ್ಲಿಸಿ ದಶಕ ಕಳೆದರೂ ಫಲಾನುಭವಿಗಳಿಗೆ ಸೌಲಭ್ಯ ಸಿಕ್ಕಿಲ್ಲ ಎಂದು ಸೋಮವಾರ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಮುಖಂಡ ವಿ.ಮಂಜುನಾಥ್ ನೇತೃತ್ವದಲ್ಲಿ ವಿದ್ಯಾರಣ್ಯಪುರಂ ಚಾಮುಂಡಿವನದಲ್ಲಿ ಜಮಾಯಿಸಿದ ಪ್ರತಿಭಟನಕಾರರು ‘ಕೃಷ್ಣರಾಜ ಕ್ಷೇತ್ರ ಆಶ್ರಯ ಸಮಿತಿ’ ವಿರುದ್ಧ ಕಿಡಿಕಾರಿದರು.

ಪ್ರತಿಭಟನೆಗೆ ಅನುಮತಿ ನೀಡದ್ದರಿಂದ ಭಿತ್ತಿಪತ್ರಗಳನ್ನು ಹಿಡಿದು ಮಳಿಗೆಗಳು ಹಾಗೂ ನಾಗರಿಕರಿಗೆ ಹಂಚಿ ಜಾಗೃತಿ ಮೂಡಿಸಿದರು.

ಮಂಜುನಾಥ್ ಮಾತನಾಡಿ, ಆಶ್ರಯ ಯೋಜನೆಯಡಿ ಮನೆ ಹಾಗೂ ನಿವೇಶನಕ್ಕಾಗಿ 2003–04ರಲ್ಲಿ 850ಕ್ಕೂ ಹೆಚ್ಚು ಮಂದಿ ಬಡವರು ₹ 10 ಸಾವಿರ ನಗದಿನ ಜೊತೆ ಅರ್ಜಿ ಸಲ್ಲಿಸಿದ್ದರು. 20 ವರ್ಷಗಳಾದರೂ ಫಲಾನುಭವಿಗಳಿಗೆ ಸೌಲಭ್ಯ ದೊರೆಕಿಲ್ಲ ಎಂದರು.

ಪಾಲಿಕೆಗೆ ಹಣ ಪಾವತಿ ಮಾಡಿ ಹೆಸರು ನೋಂದಾಯಿಸಿಕೊಂಡು ಕಾಯುತ್ತಿದ್ದರೂ ಆಶ್ರಯ ಸಮಿತಿ ಅಧಿಕಾರಿಗಳು ಮನೆ ನೀಡಲು ವಿಫಲರಾಗಿದ್ದಾರೆ. ಬಡವರು ಬಾಡಿಗೆ ಮನೆಯಲ್ಲಿಯೇ ವಾಸ ಮಾಡುವಂತಾಗಿದೆ. ಜೀವನ ನಿರ್ವಹಣೆಯೂ ದುಸ್ತರವಾಗಿದೆ ಎಂದು ದೂರಿದರು.

ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರಿಂದಲೇ ಬಡವರಿಗೆ ಅನ್ಯಾಯವಾಗಿದೆ. ದಶಕದಿಂದಲೂ ಹತ್ತಾರು ಬಾರಿ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಮಿತಿಯ ಅಧ್ಯಕ್ಷರಾದ ಶಾಸಕ ಎಸ್‌.ಎ.ರಾಮದಾಸ್‌ ಬೇಡಿಕೆ ಈಡೇರಿಸುತ್ತಿಲ್ಲ. ನ್ಯಾಯಯುತ ಪ್ರತಿಭಟನೆ ನಡೆಸಲು ಅವಕಾಶ ನೀಡಿಲ್ಲ ಎಂದು ಆರೋಪಿಸಿದರು.

ಮನೆ ಹಾಗೂ ನಿವೇಶನಗಳ ಹಕ್ಕು ಪತ್ರಗಳನ್ನು ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

 ‌ಮುಖಂಡರಾದ ಸುನಿಲ್‌ ಕುಮಾರ್, ಅಶ್ವಿನಿ, ರವಿ ಉಮಾರ್, ಎಸ್‌.ಮಂಜು, ರಮೇಶ್‌, ಅಶ್ವಿನಿ, ಶಿವಕುಮಾರ್‌ ಇದ್ದರು.