ಮನೆ ಅಪರಾಧ ವರದಕ್ಷಿಣೆ ದಾಹಕ್ಕೆ ಗೃಹಿಣಿ ಬಲಿ : ಪತಿ ಬಂಧನ

ವರದಕ್ಷಿಣೆ ದಾಹಕ್ಕೆ ಗೃಹಿಣಿ ಬಲಿ : ಪತಿ ಬಂಧನ

0

ಹುಣಸೂರು : ಕುಡಿತದ ಚಟಕ್ಕೆ ದಾಸನಾಗಿದ್ದ ಪತಿಯ ಕಿರುಕುಳ, ಮತ್ತೊಂದೆಡೆ ಅತ್ತೆ-ಮಾವ, ಮೈದನನ ವರದಕ್ಷಿಣೆ ದಾಹಕ್ಕೆ ಗೃಹಿಣಿಯೊಬ್ಬರು ಬಲಿಯಾಗಿರುವ ಘಟನೆ ತಾಲೂಕಿನ ಸಿಂಡೇನಹಳ್ಳಿಯಲ್ಲಿ ನಡೆದಿದೆ.

ಹುಣಸೂರು ತಾಲೂಕು ಹನಗೋಡು ಹೋಬಳಿಯ ಸಿಂಡೇನಹಳ್ಳಿ ಗ್ರಾಮದ ಶ್ರೀನಿವಾಸರ ಪತ್ನಿ ರೇಷ್ಮಾ(೨೫)ಮೃತರು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಆರೋಪಿ ಪತಿ ಶ್ರೀನಿವಾಸನನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಘಟನೆ : ಹನಗೋಡಿಗೆ ಸಮೀಪದ ಈರತಯ್ಯನಕೊಪ್ಪಲಿನ ಚಂದ್ರೇಗೌಡ-ಶಾಂತಮ್ಮ ದಂಪತಿ ಪುತ್ರಿ ರೇಷ್ಮಾಳನ್ನು ಶ್ರೀನಿವಾಸನಿಗೆ ಕಳೆದ ೬ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಇತ್ತೀಚಿಗೆ ಗಂಡ-ಹೆಂಡತಿ ನಡುವೆ ವಿರಸ ಉಂಟಾಗಿ ಹಿರಿಯರು ಅನೇಕ ಬಾರಿ ನ್ಯಾಯ ಪಂಚಾಯ್ತಿ ಮಾಡಿ ತಿಳಿಹೇಳಿ ಕಳುಹಿಸಿದ್ದರು. ಆದರೂ ಆಗಾಗ್ಗೆ ವರದಕ್ಷಿಣೆ ತರುವಂತೆ ಪತಿ ಶ್ರೀನಿವಾಸ್ ಪೀಡಿಸುತ್ತಾ ಗಲಾಟೆ ಮಾಡುತ್ತಿದ್ದರಿಂದ ಬೇಸತ್ತ ಮಗಳು ಗಂಡನ ಮನೆಯಲ್ಲೇ ಮಾ.೧೧ರ ಮಂಗಳವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಸಾವಿಗೆ ಪತಿ ಶ್ರೀನಿವಾಸ, ಈತನ ಸಹೋದರ ಶ್ರೀಧರ್, ತಂದೆ-ತಾಯಿ ಮಾದೇಗೌಡ-ಸರಸಮ್ಮ ನವರೇ ಕಾರಣವೆಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರೇಷ್ಮಾಳ ತಾಯಿ ಶಾಂತಮ್ಮ ದೂರು ದಾಖಲಿಸಿದ್ದಾರೆ.

ಇನ್ಸ್ಪೆಕ್ಟರ್ ಮುನಿಸ್ವಾಮಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಶ್ರೀನಿವಾಸಸನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ತಹಸೀಲ್ದಾರ್ ಎಂ.ಮಂಜುನಾಥ್ ಭೇಟಿ ನೀಡಿ ವಿಚಾರಣೆ ನಡೆಸಿದ ನಂತರ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ.