ಮನೆ ಸುದ್ದಿ ಜಾಲ ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಕುಸಿತ: ಗೃಹಿಣಿ ಸ್ಥಳದಲ್ಲೇ ಸಾವು

ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಕುಸಿತ: ಗೃಹಿಣಿ ಸ್ಥಳದಲ್ಲೇ ಸಾವು

0

ವಿಜಯಪುರ: ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ ಮುಂದುವರೆದ ಮಳೆ ವಾತಾವರಣ ಭೀಕರ ರೂಪ ಪಡೆದಿದ್ದು, ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಗೃಹಿಣಿಯೊಬ್ಬರು ದುರ್ಮರಣಕ್ಕೆ ಒಳಗಾದ ಘಟನೆ ನಡೆದಿದೆ.

ಘಟನೆ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ್ದು, ಸಂಗೀತಾ ಬಾಳಾಸಾಹೇಬ ಪಾಟೀಲ್ (30) ಎಂಬ ಗೃಹಿಣಿಯು ಮೃತಪಟ್ಟಿದ್ದಾರೆ. ರಾತ್ರಿ ವೇಳೆಗೆ ಸುರಿದ ಭಾರೀ ಮಳೆ ಹಾಗೂ ಗಾಳಿ, ಮನೆ ಮೇಲ್ಛಾವಣಿಗೆ ಗಂಭೀರ ಹಾನಿಯನ್ನುಂಟುಮಾಡಿದ್ದು, ತೀವ್ರ ಗಾಳಿಗೆ ಮನೆಯ ಹಳೆ ಶೀಟುಗಳು ಕುಸಿದು ಬಿದ್ದವು.

ಪತಿ ಬಾಳಾಸಾಹೇಬ ಪಾಟೀಲ್ ಹಾಗೂ ಅವರ ಮಕ್ಕಳು ಮನೆಯ ಒಳಗೆ ಮಲಗಿದ್ದ ಸಂದರ್ಭದಲ್ಲಿ, ಮಳೆಯಿಂದಾಗಿ ಮನೆ ಸೋರುತ್ತಿರುವುದನ್ನು ಗಮನಿಸಿದ ಕುಟುಂಬದವರು ಎಚ್ಚರಗೊಂಡು ಹೊರಗೆ ಓಡಿದ್ದಾರೆ. ಆದರೆ, ಸಂಗೀತಾ ಎಚ್ಚರವಾಗುವಷ್ಟರಲ್ಲಿ ಮನೆಯ ಮೇಲ್ಛಾವಣಿಯು ಅವರ ಮೇಲೆ ಬಿದ್ದು, ಸ್ಥಳದಲ್ಲಿಯೇ ಅವರು ಮೃತಪಟ್ಟಿದ್ದಾರೆ.

ಸ್ಥಳೀಯ ನಿವಾಸಿಗಳು ತಕ್ಷಣವೇ ಘಟನೆ ಬಗ್ಗೆ ತಿಳಿದು ಸ್ಥಳಕ್ಕೆ ಧಾವಿಸಿ ಮಣ್ಣಿನಲ್ಲಿ ಮುಚ್ಚಲ್ಪಟ್ಟಿದ್ದ ಮೃತದೇಹವನ್ನು ಹೊರತೆಗೆದು, ತಿಕೋಟಾ ತಾಲೂಕು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಈ ಘಟನೆ ತಿಕೋಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.