ಉತ್ತರ ಪ್ರದೇಶ(Uttarpradesh): ನೋಯ್ಡಾದಲ್ಲಿ ನಿರ್ಮಾಣಗೊಂಡಿದ್ದ ಹೌಸಿಂಗ್ ಸೊಸೈಟಿವೊಂದರ ಕಟ್ಟಡದ ಗೋಡೆ ಕುಸಿದ ಪರಿಣಾಮ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಂದು ಬೆಳಗ್ಗೆ ದುರ್ಘಟನೆ ನಡೆದಿದ್ದು, ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಕೆಲವರು ಅವಶೇಷಗಳಡಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಎಲ್ಲರನ್ನೂ ವಿವಿಧ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನೋಯ್ಡಾ ಜಿಲ್ಲಾಧಿಕಾರಿ ಸುಹಾಸ್ ಎಲ್ವೈ ಮಾತನಾಡಿ, ನೋಯ್ಡಾ ಸೆಕ್ಟರ್-21ರಲ್ಲಿ ಜಲ ವಾಯು ವಿಹಾರ್ ಬಳಿ ಒಳಚರಂಡಿ ದುರಸ್ತಿ ಕಾಮಗಾರಿಗೋಸ್ಕರ ನೋಯ್ಡಾ ಪ್ರಾಧಿಕಾರ ಗುತ್ತಿಗೆ ನೀಡಿತ್ತು. ಕಾರ್ಮಿಕರು ಇಟ್ಟಿಗೆ ಹೊರತೆಗೆಯುತ್ತಿದ್ದ ವೇಳೆ ದಿಢೀರ್ ಆಗಿ ಗೋಡೆ ಕುಸಿದಿದೆ ಎಂದಿದ್ದಾರೆ.
ಘಟನೆ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತೀವ್ರ ಸಂತಾಪ ವ್ಯಕ್ತಪಡಿಸಿ, ಘಟನೆಯಲ್ಲಿ ಗಾಯಗೊಂಡಿರುವ ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡುವಂತೆ ನಿರ್ದೇಶನ ನೀಡಿದ್ದಾರೆ.