ಮನೆ ರಾಜಕೀಯ ಬರದ ನಡುವೆ ತಡೆರಹಿತ ವಿದ್ಯುತ್‌ ಪೂರೈಕೆ  ಸಾಧ್ಯವಾಗಿಸಿದ್ದು ಹೇಗೆ?:  ವಿವರ ನೀಡಿದ ಜಾರ್ಜ್‌

ಬರದ ನಡುವೆ ತಡೆರಹಿತ ವಿದ್ಯುತ್‌ ಪೂರೈಕೆ  ಸಾಧ್ಯವಾಗಿಸಿದ್ದು ಹೇಗೆ?:  ವಿವರ ನೀಡಿದ ಜಾರ್ಜ್‌

0

ಇದೇ ಜೂನ್ 16ರಿಂದ ಸೆಪ್ಟೆಂಬರ್‌ 30ರವರೆಗೆ ಉತ್ತರ ಪ್ರದೇಶ ಹಾಗೂ ಪಂಜಾಬ್‌ ವಿದ್ಯುತ್‌ ಹಿಂದುರಿಗಿಸಲಿದೆ ಕರ್ನಾಟಕ

ಬೆಂಗಳೂರು: ಮಳೆ ಕೊರತೆ, ಜಲಾಶಯಗಳಲ್ಲಿ ಕಡಿಮೆಯಾದ ನೀರಿನ ಲಭ್ಯತೆ ಮಧ್ಯೆಯೂ ಕಳೆದ ಬೇಸಿಗೆಯಲ್ಲಿ ಯಾವುದೇ ಲೋಡ್ ಶೆಡ್ಡಿಂಗ್ ಇಲ್ಲದೆ, ರೈತರು, ವಿದ್ಯಾರ್ಥಿ ಸಮುದಾಯಕ್ಕೆ ಹೆಚ್ಚು ಸಮಸ್ಯೆಯಾಗದಂತೆ ಇಂಧನ ಇಲಾಖೆ ವಿದ್ಯುತ್ ಪೂರೈಸಿದೆ.

Join Our Whatsapp Group

ವಿದ್ಯುತ್ ಖರೀದಿಯಿಂದ ಹೆಚ್ಚು ಹೊರೆಯಾಗದಂತೆ ನೋಡಿಕೊಳ್ಳಲು ಅನ್ಯ ರಾಜ್ಯಗಳೊಂದಿಗೆ ವಿದ್ಯುತ್ ವಿನಿಮಯ ಮಾಡಿಕೊಳ್ಳಲಾಗಿತ್ತು. ಅಲ್ಲದೇ, ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ದಾಖಲೆಯ ವಿದ್ಯುತ್ ಉತ್ಪಾದನೆ, ವಿದ್ಯುತ್‌ ಕಾಯ್ದೆಯ ಸೆಕ್ಷನ್ 11 ಜಾರಿಗೊಳಿಸಿ ರಾಜ್ಯದಲ್ಲಿರುವ ಖಾಸಗಿ ವಿದ್ಯುತ್ ಉತ್ಪಾದಕರು ರಾಜ್ಯ ಗ್ರಿಡ್‌ಗೆ ವಿದ್ಯುತ್ ನೀಡುವಂತೆ ನೋಡಿಕೊಳ್ಳುವ ಮೂಲಕ ಬೇಸಿಗೆಯ ವಿದ್ಯುತ್ ಬೇಡಿಕೆಯನ್ನು ಪೂರೈಸಲಾಗಿದೆ. ಈ ಬಗ್ಗೆ ಇಂಧನ ಸಚಿವ ಕೆ.ಜೆ. ಜಾರ್ಜ್‌ ಮಾಧ್ಯಮದವರೊಂದಿಗೆ ಇಲಾಖೆ ಕೈಗೊಂಡಿದ್ದ ಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

“ಈ ಬಾರಿ ವಿದ್ಯುತ್ ಬೇಡಿಕೆ ಹೆಚ್ಚಿದ್ದು, ಬೇಡಿಕೆಗೆ ಅನುಗುಣವಾಗಿ ವಿದ್ಯುತ್‌ ಒದಗಿಸುವುದು ನಮ್ಮ ಜವಾಬ್ದಾರಿ. ಅದರಂತೆ ಹೊರ ರಾಜ್ಯಗಳೊಂದಿಗೆ ವಿನಿಮಯ ಒಪ್ಪಂದ ಮಾಡಿಕೊಂಡೆವು, ಮಾರುಕಟ್ಟೆಯಿಂದ ಖರೀದಿಸಿದೆವು. ಒಟ್ಟಾರೆಯಾಗಿ ವಿದ್ಯುತ್‌  ಪೂರೈಕೆಯಲ್ಲಿ ಯಾವುದೇ ಬಿಕ್ಕಟ್ಟಿಲ್ಲದಂತೆ, ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಂಡಿದ್ದೇವೆ ಎಂಬ ಸಾರ್ಥಕ ಭಾವ ಇದೆ. ಖರೀದಿ ಹೊರತಾಗಿ ರಾಜ್ಯದ 3 ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಕಳೆದ ವರ್ಷ ಗರಿಷ್ಠ 22,000 ಮಿ.ಯೂ. ವಿದ್ಯುತ್ ಉತ್ಪಾದನೆಯಾಗಿದೆ,”ಎಂದು ಅವರು ಹೇಳಿದರು.

“ಕಳೆದ ಮುಂಗಾರು ಮತ್ತು ಹಿಂಗಾರಿನಲ್ಲಿ ಮಳೆ ಕೊರತೆಯಿಂದ ಆಗಸ್ಟ್ ತಿಂಗಳಿನಿಂದಲೇ ಬೇಸಿಗೆಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಮೊದಲೇ ಮುನ್ನೆಚ್ಚರಿಕೆ ವಹಿಸಿದ ಪರಿಣಾಮ ಬೇಸಿಗೆಯಲ್ಲಿ ಹೆಚ್ಚು ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸಾಧ್ಯವಾಯಿತು. ಯಾವುದೇ ಕಾರಣಕ್ಕೂ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದರು. ಅದಕ್ಕೆ ತಕ್ಕಂತೆ ವಿದ್ಯುತ್ ಪೂರೈಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು,” ಎಂದು ಜಾರ್ಜ್‌ ತಿಳಿಸಿದರು.

“ಈ ಮಧ್ಯೆ ದಿನವೊಂದಕ್ಕೆ ದಾಖಲೆಯ ವಿದ್ಯುತ್ ಬೇಡಿಕೆ ಮತ್ತು ಪೂರೈಕೆಗೂ ಈ ಬೇಸಿಗೆ ಸಾಕ್ಷಿಯಾಗಿತ್ತು. 2024 ಮಾರ್ಚ್‌ 12ರಂದು ಅತಿ ಹೆಚ್ಚಿನ ಬೇಡಿಕೆ ಅಂದರೆ 17220 ಮೆ.ವ್ಯಾ. ಇತ್ತು. ಅದರಂತೆ ವಿದ್ಯುತ್ ಪೂರೈಸಲಾಗಿತ್ತು. ಅದೇ ರೀತಿ 2024ರ ಏಪ್ರಿಲ್‌ 5ರಂದು ಅತಿ ಹೆಚ್ಚು ಅಂದರೆ 332 ಮೆ.ಯೂ. ವಿದ್ಯುತ್‌ ಬಳಕೆಯಾದ ದಿನವಾಗಿತ್ತು. ಇದು ಇಂಧನ ಇಲಾಖೆಯಲ್ಲಿ ದಾಖಲೆಯ ವಿದ್ಯುತ್ ಪೂರೈಕೆಯಾಗಿದೆ,” ಎಂದು ಅವರು ಹೇಳಿದರು.

ವಿದ್ಯುತ್ ವಿನಿಮಯಕ್ಕೆ ಒತ್ತು

“ಇಂಧನ ಇಲಾಖೆ ವಿದ್ಯುತ್ ಖರೀದಿ ಬದಲಾಗಿ ವಿನಿಯಮ ಮಾಡಿಕೊಂಡು ಬೊಕ್ಕಸಕ್ಕೆ ಹೆಚ್ಚು ಹೊರೆಯಾಗದಂತೆ ನೋಡಿಕೊಳ್ಳಲು ಮುಂದಾಗಿ ಹೊರ ರಾಜ್ಯಗಳಿಂದ ವಿದ್ಯುತ್ ಪಡೆದು ಅದನ್ನು ಮುಳೆಗಾಲದಲ್ಲಿ ವಾಪಸ್ ಮಾಡಲು ಯೋಜನೆ ರೂಪಿಸಲಾಗಿತ್ತು. ಅದರಂತೆ ಪಂಜಾಬ್‌ ಮತ್ತು ಉತ್ತರ ಪ್ರದೇಶದೊಂದಿಗೆ 2023 ನವೆಂಬರ್‌ನಿಂದ 2024 ಮೇವರೆಗೂ ವಿದ್ಯುತ್‌ ವಿನಿಮಯದ ಒಪ್ಪಂದ ಮಾಡಿಕೊಂಡು ಗ್ರಾಹಕರಿಗೆ ವಿದ್ಯುತ್ ಪೂರೈಸಲಾಗಿದೆ. ಇದೇ ಜೂನ್ 16ರಿಂದ ಈ ಎರಡೂ ರಾಜ್ಯಗಳಿಗೆ ವಿದ್ಯುತ್ ಹಿಂತಿರುಗಿಸಲಾಗುತ್ತದೆ. ಇದರಿಂದಾಗಿ ವಿದ್ಯುತ್ ಖರೀದಿಯ ಅಗತ್ಯ ಕಡಿಮೆಯಾಗಿತ್ತು,” ಎಂದು ಅವರು ತಿಳಿಸಿದರು.

ಗರಿಷ್ಠ ವಿದ್ಯುತ್ ಉತ್ಪಾದನೆ

ಈ ಬಾರಿ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಗರಿಷ್ಠ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಅದರಲ್ಲೂ ಕಳೆದ ಜನವರಿಯಿಂದ ಮೇ ಅಂತ್ಯದವರೆಗೆ ಪ್ರತಿನಿತ್ಯ ಸರಾಸರಿ 2000 ಮಿಲಿಯನ್ ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಅದರಲ್ಲೂ ಏಪ್ರಿಲ್ ನಲ್ಲಿ 2,400 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿದ್ದು, ಇದು ದಾಖಲೆಯಾಗಿದೆ.

ಅದರಲ್ಲೂ ಆರ್‌ಟಿಪಿಎಸ್‌ ವಿದ್ಯುತ್‌ ಘಟಕಗಳಿಂದ ನಿಗದಿತ ಗುರಿ ಮೀರಿ ಹೆಚ್ಚಿನ ವಿದ್ಯುತ್‌ ಉತ್ಪಾದನೆ ಆಗಿದೆ.  ದಿನಕ್ಕೆ 210 ಮೆಗಾವ್ಯಾಟ್‌ ಸಾಮರ್ಥ್ಯದ 3ನೇ ವಿದ್ಯುತ್‌ ಘಟಕದಲ್ಲಿ ಏಪ್ರಿಲ್‌ 4ರಂದು 216 ಮೆಗಾವ್ಯಾಟ್‌ ಉತ್ಪಾದನೆ ಮಾಡಲಾಗಿದ್ದು, ಆ ಮೂಲಕ ಇತಿಹಾಸ ಬರೆಯಲಾಗಿದೆ. ತಾಂತ್ರಿಕ ಸಮಸ್ಯೆಗಳ ನಡುವೆಯೂ ಆರ್‌ಟಿಪಿಎಸ್‌ನ ಏಳು ವಿದ್ಯುತ್‌ ಘಟಕಗಳು ಸೇರಿ ಶೇ. 85ರಷ್ಟು ವಿದ್ಯುತ್‌ ಉತ್ಪಾದಿಸಿವೆ.

ಅದೇರೀತಿ, ಯರಮರಸ್‌ ಶಾಖೋತ್ಪನ್ನ ವಿದ್ಯುತ್‌ ಕೇಂದ್ರ (ವೈಟಿಪಿಎಸ್‌) 2023-24 ಹಣಕಾಸು ವರ್ಷದಲ್ಲಿ 6229.250 ಮಿ.ಯೂ. ಉತ್ಪಾದಿಸಿದೆ. ಇದು ಈವರೆಗಿನ ಗರಿಷ್ಠ ಉತ್ಪಾದನೆ. ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರದ 6000 ಮಿ.ಯೂ. ಗುರಿಯನ್ನು ವೈಟಿಪಿಎಸ್‌ ಮೀರಿದೆ. ಇನ್ನು ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರ 8208.476 ಮಿ.ಯೂ ವಿದ್ಯುತ್‌ ಉತ್ಪಾದಿಸಿದೆ. ಸ್ಥಾವರ ಕಾರ್ಯಾರಂಭ ಮಾಡಿದ ನಂತರ ಸಾಧಿಸಿದ ಅತ್ಯಧಿಕ ಉತ್ಪಾದನೆಯ ದಾಖಲೆ ಇದಾಗಿದೆ.

ಕಲ್ಲಿದ್ದಲು ಕೊರತೆ ಇಲ್ಲ

ಉಷ್ಣ ವಿದ್ಯುತ್ ಸ್ಥಾವರಗಳು ನಿರೀಕ್ಷೆ ಮೀರಿ ವಿದ್ಯುತ್ ಉತ್ಪಾದಿಸಲು ಮುಖ್ಯ ಕಾರಣ ಕಲ್ಲಿದ್ದಲು ಸಮಸ್ಯೆ ದುರಾಗದಂತೆ ನೋಡಿಕೊಂಡಿದ್ದು. ಕೇಂದ್ರ ಸರಕಾರದ ಜತೆ ಸಮನ್ವಯ ಸಾಧಿಸಿ ಅಗತ್ಯ ಕಲ್ಲಿದಲ್ಲು ಸಂಗ್ರಹವಾಗುವಂತೆ ನೋಡಿಕೊಳ್ಳುವುದರೊಂದಿಗೆ, ವಿದೇಶಿ ಕಲ್ಲಿದ್ದಲು ಮಿಶ್ರಣ ಮ ಡಿ ಹೆಚ್ಚಿನ ಉತ್ಪಾದನೆಗೆ ಗಮನಹರಿಸಲಾಗಿತ್ತು.

ಜಲ ವಿದ್ಯುತ್ ಉತ್ಪಾದನೆಯಲ್ಲಿ ಸಮನ್ವಯತೆ

ಮಳೆ ಕೊರತೆ ಇದ್ದುದರಿಂದ ಜಲ ವಿದ್ಯುತ್ ಉತ್ಪಾದನೆ ಕುರಿತು ಎಚ್ಚರಿಕೆಯಿಂದ ನಿರ್ಧರಿಸಲಾಗುತ್ತಿತ್ತು. ಜಲ ವಿದ್ಯುತ್ ಉತ್ಪಾದನಾ ಘಟಕಗಳಿಂದ 2023-24ನೇ ಸಾಲಿನಲ್ಲಿ ಒಟ್ಟಾರೆ 8,860 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿದರೆ, 2024ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 1,119 ಮಿಲಿಯನ್ ಯೂನಿಟ್ ಉತ್ಪಾದನೆ ಮಾಡಲಾಗಿದೆ. ಇದರ ಜತೆಗೆ ಮಳೆ ಬಾರದಿದ್ದರೂ ಜೂನ್ ಅಂತ್ಯದವರೆಗೆ ವಿದ್ಯುತ್ ಉತ್ಪಾದನೆಗೆ ಸಮಸ್ಯೆಯಾಗದಂತೆ ಅಗತ್ಯ ನೀರು ಸಂಗ್ರಹಿಸಿಟ್ಟುಕೊಳ್ಳಲಾಗಿದೆ. ಅದರಲ್ಲೂ ಪ್ರಮುಖ ಜಲಾಶಯಗಳಾದ ಸೂಪಾ (ಶೇ. 23.2), ಲಿಂಗನಮಕ್ಕಿ (ಶೇ. 9.4), ಮಾಣಿ (ಶೇ. 11.7) ನೀರು ಸಂಗ್ರಹವಿದೆ.

ಹಿಂದಿನ ಲೇಖನಪ್ರಾಣಿಗಳ ಆರೈಕೆ ಮತ್ತು ನಿರ್ವಹಣೆ ಡಿಪ್ಲೊಮಾ ಕೋರ್ಸ್ ಆರಂಭಿಸಲು ತಾತ್ವಿಕ ಒಪ್ಪಿಗೆ
ಮುಂದಿನ ಲೇಖನಹಾಸ್ಯ