ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಪೊಲೀಸರು ತನಿಖೆ ನಡೆಸಿ, ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಈ ಚಾರ್ಜ್ಶೀಟ್ನಲ್ಲಿ ಇರೋ ಮಾಹಿತಿಯ ವಿಚಾರಗಳು ಈಗ ಒಂದೊಂದಾಗಿಯೇ ಹೊರಬರುತ್ತಾ ಇವೆ.
ರೇಣುಕಾ ಸ್ವಾಮಿ ಕಳುಹಿಸಿದ ಅಶ್ಲೀಲ ಸಂದೇಶದ ಬಗ್ಗೆ ಪವನ್ ಬಳಿ ಪವಿತ್ರಾ ಹೇಳಿಕೊಂಡಿದ್ದರು. ಮೆಸೇಜ್ ಬಗ್ಗೆ ದರ್ಶನ್ಗೆ ತೋರಿಸಿದ್ದಾಗ ಅವರನ್ನು ಎತ್ತಿಕೊಂಡು ಬರಲು ದರ್ಶನ್ ಸೂಚನೆ ನೀಡಿದ್ದರು. ದರ್ಶನ್ ಆಣತಿಯಂತೆ ರೇಣುಕಾ ಸ್ವಾಮಿಯನ್ನು ಎತ್ತಿಕೊಂಡು ಬಂದು ಪಟ್ಟಣಗೆರೆ ಶೆಡ್ ನಲ್ಲಿ ಇಡಲಾಯಿತು. ಶೆಡ್ನಲ್ಲಿ ಇಟ್ಟ ಬಗ್ಗೆ ದರ್ಶನ್ ಗೆ ಮಾಹಿತಿ ರವಾನೆ ಆಗಿತ್ತು. ನೇರವಾಗಿ ಪವಿತ್ರಾ ಮನೆಗೆ ತೆರಳಿದ ದರ್ಶನ್ ಅವರನ್ನು ಪಿಕ್ ಮಾಡಿಕೊಂಡು ಶೆಡ್ ಗೆ ಬಂದರು.
ದರ್ಶನ್ ಬಂದು ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡುತ್ತಾರೆ. ರಿಬ್ ಮುರಿದು ಹಾಕುವ ಅವರು, ಮರ್ಮಾಂಗಕ್ಕೆ ಹೊಡೆಯುತ್ತಾರೆ. ಲಾಠಿನಲ್ಲಿಯೂ ದರ್ಶನ್ ಹಲ್ಲೆ ಮಾಡಿದ್ದಾರೆ. ಪವಿತ್ರಾ ಚಪ್ಪಲಿಯಿಂದ ಹಲ್ಲೆ ಮಾಡುತ್ತಾರೆ. ಆ ಬಳಿಕ ದರ್ಶನ್ ಮತ್ತೆ ಹಲ್ಲೆ ಮಾಡುತ್ತಾರೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖ ಇದೆ.
ಹಲ್ಲೆ ಬಳಿಕ ಶೆಡ್ ನಲ್ಲಿರುವ ವಾಚ್ಮೆನ್ ರೂಮ್ನಲ್ಲಿ ರೇಣುಕಾ ಸ್ವಾಮಿಯನ್ನು ಹಾಕಿರಲಾಗುತ್ತದೆ. ಅಲ್ಲಿ ಚೆಕ್ ಮಾಡಿದಾಗ ರೇಣುಕಾ ಸ್ವಾಮಿಗೆ ಪಲ್ಸ್ ಇಲ್ಲ ಎನ್ನುವ ವಿಚಾರ ಗೊತ್ತಾಗುತ್ತದೆ. ಆ ಬಳಿಕ ಪ್ರದೋಶ್ ಮುಂದಿನ ಎಲ್ಲಾ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಮರುದಿನ ದರ್ಶನ್ ಮನೆಯಲ್ಲಿ ನಡೆದ ಪೂಜೆಯಲ್ಲಿ ಭಾಗಿ ಆಗುತ್ತಾರೆ. ಅಂದು ರಾತ್ರಿಯೇ ದರ್ಶನ್ ಮೈಸೂರಿಗೆ ಪ್ರಯಾಣ ಬೆಳೆಸುತ್ತಾರೆ.
ಪ್ರಕರಣ ಸಂಬಂಧ 17 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನದಲ್ಲಿಸಿದ್ದಾರೆ. ಈ ಸಂಬಂಧ ಪೊಲೀಸರು 3,991 ಪುಟಗಳ ಆರೋಪ ಪಟ್ಟಿಯನ್ನು ಸಲ್ಲಿಸಿದಾರೆ.
ರೇಣುಕಾಸ್ವಾಮಿ ಅಸಹಾಯಕತೆಯ ಫೋಟೋ ವೈರಲ್
ಆರೋಪ ಪಟ್ಟಿ ಸಲ್ಲಿಕೆಯಾದ ಬಳಿಕ ಸಾಯುವುದಕ್ಕೂ ಮುನ್ನ ರೇಣುಕಾಸ್ವಾಮಿ ನೋವಿನಿಂದ ಕೂತು ಕ್ಷಮಿಸಿ ಎನ್ನುವ ನೋಟವುಳ್ಳ ಅಸಹಾಯಕತೆಯ ಫೋಟೋ ಈಗ ವೈರಲ್ ಆಗಿದೆ.
ಈ ಫೋಟೋ ಗಳು ಆರೋಪಿ ವಿನಯ್ ಫೋನ್‌ನಿಂದ ರಿಟ್ರೀವ್ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ. ಒಂದು ಫೋಟೋ ರೇಣುಕಾಸ್ವಾಮಿ ಅಂಗಲಾಚುವ ರೀತಿಯಿದ್ದು, ಇನ್ನೊಂದು ಫೋಟೋ ಎದೆ ಮೇಲೆ ಕೈಯಿಟ್ಟು ಮಲಗಿರುವ ರೀತಿಯಲ್ಲಿದೆ.
ಸದ್ಯ ವೈರಲ್ ಆಗಿರುವ ಫೋಟೋಗಳ ಬಗ್ಗೆ ಪೊಲೀಸರು ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ.
ಹಲವು ಸಾಕ್ಷ್ಯಗಳ ಉಲ್ಲೇಖ: ಕೋರ್ಟ್‌ಗೆ ಸಲ್ಲಿಕೆ ಮಾಡಿರುವ ದೋಷಾರೋಪಪಟ್ಟಿಯಲ್ಲಿ ಆರೋಪಿಗಳ ವಿರುದ್ಧ ಹಲವು ಸಾಕ್ಷ್ಯಗಳನ್ನು ಉಲ್ಲೇಖ ಮಾಡಲಾಗಿದೆ. 3 ಪ್ರತ್ಯಕ್ಷ ಸಾಕ್ಷಿಗಳಿದ್ದು, ಎಫ್ಎಸ್ಎಲ್ ಮತ್ತು ಸಿಎಫ್ಎಸ್ಎಲ್ನಿಂದ 8 ವರದಿಗಳಿವೆ. 27 ಜನರ 164ರ ಅಡಿಯಲ್ಲಿ ಹೇಳಿಕೆ, 161 ಅಡಿಯಲ್ಲಿ 70 ಜನರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಜೊತೆಗೆ 59 ಜನ ಸಮಕ್ಷಮದಲ್ಲಿ ಮಹಜರು ಮಾಡಲಾಗಿದೆ. 8 ವೈದ್ಯರು, ತಹಶೀಲ್ದಾರ್ ಸೇರಿದಂತೆ ಸರ್ಕಾರಿ ಅಧಿಕಾರಿಗಳ ಸಾಕ್ಷಿ ಕೂಡ ಉಲ್ಲೇಖ ಮಾಡಲಾಗಿದೆ ಎಂದು ತಿಳಿದು ಬಂದಿದೆ.