ಹಾವೇರಿ: ಮೂರು ವರ್ಷ ಬಿಜೆಪಿ ಯಾವುದೆ ಬಿಲ್ ಮತ್ತು ಹಣ ಬಿಡುಗಡೆ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಶನಿವಾರ ಹೇಳಿಕೆ ನೀಡಿದ್ದಾರೆ.
ಶಿಗ್ಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ”ನಾವು ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಂಜೂರಾದ 6,500 ಕೋಟಿ ರೂ. ಕೊಟ್ಟಿದ್ದೇವೆ. ಕಳೆದ ಜನವರಿಯಲ್ಲಿ 600 ಕೋಟಿ ರೂ.ಕೊಟ್ಟಿದ್ದೇವೆ. 250 ಕೋಟಿ ರೂ.ಮೇ 6 ರಂದು ಬಿಬಿಎಂಪಿ ಅಕೌಂಟ್ ಗೆ ಬಂದಿದೆ. ಆಗ ಸಿದ್ದರಾಮಯ್ಯ ನವರು ಸಿಎಂ ಇರಲಿಲ್ಲ, ಕಾಂಗ್ರೆಸ್ ಸರಕಾರ ಇರಲಿಲ್ಲ. ತನಿಖೆಯ ನೆಪದಲ್ಲಿ ಎಲ್ಲಾ ಕಾಮಗಾರಿ ನಿಲ್ಲಿಸುವುದು ಎಷ್ಟು ಸರಿ. ಇದರಲ್ಲಿ ಏನೋ ಅವ್ಯವಹಾರ ಇದೆ ಎನ್ನುವ ಸಂಶಯ ಬರುತ್ತಿದೆ” ಎಂದರು.
”ತನಿಖೆ ಮಾಡುತ್ತೇವೆ ಎಂದು ಹೇಳಿ ಮೂರು ತಿಂಗಳಾಯಿತು. ಇದರ ಬಗ್ಗೆ ಪಾರದರ್ಶಕತೆ ಇಲ್ಲ.ಸ್ಪಷ್ಟತೆಯಿಂದ ಬರಬೇಕು. ಮೋದಿಯವರ ಮೇಲೆ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ. ಇಲ್ಲಿ ಕಾಂಗ್ರೆಸ್ ಇದೆ, ಸರಕಾರದ ಮೇಲೆ ಆಪಾದನೆ ಬಂದಿದೆ. ದೆಹಲಿಗೆ ಹೋದಾಗ ಭ್ರಷ್ಟಾಚಾರಕ್ಕೆ ನಾವು ಜಿರೋ ಟಾಲರೆನ್ಸ್ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಕೂಡಲೇ ಬಿಲ್ ಬಿಡುಗಡೆ ಮಾಡಿಸಿ,ಇಲ್ಲದಿದ್ದರೆ ವರಿಷ್ಟರು ಕೂಡ ಇದರಲ್ಲಿ ಭಾಗಿಯಾಗಿದ್ದಾರೆ ಎನ್ನುವ ಸಂಶಯ ಬರುತ್ತದೆ ಎಂದಿದ್ದೇನೆ. ಇದನ್ನು ತಿರುಚುವ ಪ್ರಯತ್ನ ಸಿಎಂ ಮಾಡುತ್ತಿದ್ದಾರೆ. ಆಗಿರುವ ಕೆಲಸಕ್ಕೆ ಬಿಲ್ ನಲ್ಲಿ ಕಮಿಷನ್ ಕೇಳುವ ಹೊಸ ಪದ್ದತಿ ಶುರು ಮಾಡಿದ್ದಾರೆ. ಹೊಸ ಟೆಂಡರ್ ಕರೆದಿದ್ದಾರೆ ಎಂದು ನಾವು ಹೇಳಿಲ್ಲ, ಇದು ರೈತರ ವಿರೋಧಿ ಸರಕಾರ ಎಂದು ಬೊಮ್ಮಾಯಿ ಹೇಳಿದರು.