ಮಕ್ಕಳಲ್ಲಿ ಹಲ್ಲಿನ ಹುಳುಕು ಕಾಣಿಸಿಕೊಳ್ಳುತ್ತದೆ. ಅದಕ್ಕೆ ಕಾರಣಗಳೇನು? ಹೇಗೆ ತಡೆಯಬಹುದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಕ್ಕಳಲ್ಲಿ ಹಲ್ಲಿಗೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. 6 ನೇ ತಿಂಗಳಿನಿಂದ ಮಗುವಿಗೆ ಹಲ್ಲು ಮೂಡಲು ಆರಂಭವಾಗುತ್ತದೆ. ಹೀಗಾಗಿ ಅಲ್ಲಿಂದಲೇ ಮಕ್ಕಳ ಹಲ್ಲುಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವುದು ಅಗತ್ಯವಾಗಿದೆ.
ಹಾಗಾದರೆ ಮಕ್ಕಳಲ್ಲಿ ಹಲ್ಲಿನ ಹುಳುಕಿಗೆ ಯಾವೆಲ್ಲಾ ಅಂಶಗಳು ಕಾರಣವಾಗಬಹುದು. ಪುಟ್ಟ ಮಕ್ಕಳ ಹಲ್ಲಿನ ಆರೈಕೆ ಹೇಗಿರಬೇಕು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಪ್ರಾಥಮಿಕ ಹಲ್ಲುಗಳು ಹುಳುಕಾಗದಂತೆ ನೋಡಿಕೊಳ್ಳುವುದು ಮುಖ್ಯ. ಸಾಮಾನ್ಯವಾಗಿ 2 ವರ್ಷದ ನಂತರ ಹೆಚ್ಚಿನ ಮಕ್ಕಳ ಹಲ್ಲಿನಲ್ಲಿ ಕುಳಿ ಬೀಳುವುದು, ಹಲ್ಲು ಕಪ್ಪಾಗುವುದು, ವಿಪರೀತ ನೋವು ಈ ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಪ್ರಾಥಮಿಕ ಹಲ್ಲುಗಳನ್ನು ಕ್ಯಾವಿಟಿಯಿಂದ ದೂರ ಇರಿಸುವುದು ದಿನನಿತ್ಯ ಅಭ್ಯಾಸದಿಂದ ಸಾಧ್ಯ.
ಹಲ್ಲಿನ ಹುಳುಕಿನ ಲಕ್ಷಣಗಳು:
ನೋವು, ಹಲ್ಲುಗಳ ಮೇಲೆ ಬಿಳಿ ಕಲೆಗಳು, ಹಲ್ಲುಗಳ ಮೇಲೆ ಕಪ್ಪು, ಕಲೆಗಳು, ಹಲ್ಲಿನ ಕಿರಿಕಿರಿ ಅಥವಾ ನೋವಿನಿಂದ ಅಳುವುದು, ತಣ್ಣನೆಯ ಆಹಾರಗಳ ಸೇವನೆಗೆ ಸಾಧ್ಯವಾಗದೇ ಇರುವುದು, ಆಹಾರ ಸೇವನೆ ಮಾಡದೇ ಇರುವುದು, ಬಾಯಿಯ ಊತ
ಆಲಸ್ಯ ಕಾಣಿಸಿಕೊಳ್ಳಬಹುದು.
ಸಿಹಿಕಾರಕ ಪದಾರ್ಥಗಳು:
ಪ್ರತೀ ಮಗುವಿನ ಹಲ್ಲುಗಳ ವ್ಯವಸ್ಥೆ ವಿಭಿನ್ನವಾಗಿರುತ್ತದೆ. ಹೀಗಾಗಿ ಹಲ್ಲು ಮತ್ತು ಒಸಡುಗಳು ನೀರನ್ನು ಹೊರತುಪಡಿಸಿ ಆಹಾರಕ್ಕೆ ಒಡ್ಡಿಕೊಂಡಾಗ, ಹಲ್ಲಿನ ಹುಳುಕು ಉಂಟಾಗಬಹುದು. ಚಾಕಲೇಟ್ಸ್, ಸ್ವೀಟ್ಸ್, ಹಾಲು, ಜ್ಯೂಸ್, ತಂಪು ಪಾನೀಯ ಅಥವಾ ಸಕ್ಕರೆ ನೀರಿನ್ನು ಆಗಾಗ ನೀಡುತ್ತಿದ್ದರೆ ಹಲ್ಲಿನಲ್ಲಿ ಕ್ಯಾವಿಟೀಸ್ ಉಂಟಾಗುವ ಸಾಧ್ಯತೆಗಳಿರುತ್ತದೆ.
ಹಲ್ಲುಗಳನ್ನು ಶುಚಿಗೊಳಿಸದಿದ್ದರೆ:
ಆಗ ತಾನೇ ಹಲ್ಲು ಹುಟ್ಟುವಾಗ ದಂತದ ಆರೈಕೆ ಅಗತ್ಯವಾಗಿರುತ್ತದೆ. ಮಗು ಆಹಾರ ಸೇವನೆ ಮಾಡಿದ ನಂತರ ಹಾಗೆ ಮಲಗಿಸುವುದು, ದಂತಗಳನ್ನು ಸರಿಯಾಗಿ ಉಜ್ಜಿ ಸ್ವಚ್ಛಗೊಳಿಸದಿದ್ದರೆ 2 ವರ್ಷ ಎನ್ನುವಷ್ಟರಲ್ಲಿ ಹಲ್ಲಿನ ಬಣ್ಣ ಬದಲಾಗಿ ಬ್ಯಾಕ್ಟೀರಿಯಾಗಳು ಬೆಳೆಯಲು ಆರಂಭಿಸುತ್ತವೆ.
ಆಹಾರ ಸೇವನೆ:
ಇತ್ತೀಚಿನ ದಿನಗಳಲ್ಲಿ ಮಕ್ಕಳು ತರಕಾರಿ, ಹಣ್ಣುಗಳಿಗಿಂತ ಹೆಚ್ಚಾಗಿ ಕೋಲ್ಡ್ ಡ್ರಿಂಕ್ಸ್, ಸ್ವೀಟ್ಸ್, ಜಂಕ್‌ಫುಡ್ಸ್‌ಗಳಿಗೇ ಹೆಚ್ಚು ಮೊರೆಹೋಗುತ್ತಿದ್ದಾರೆ. ಇದು ಪ್ರಾಥಮಿಕ ಹಲ್ಲುಗಳನ್ನು ಹಾನಿಗೊಳಿಸುತ್ತವೆ. ಒಮ್ಮೆ ಆ ಹಲ್ಲುಗಳು ಬಿದ್ದು ಮತ್ತೆ ಹುಟ್ಟಿದರೂ ಕೂಡ ಹಲ್ಲಿನ ಸಮಸ್ಯೆ ಕಟ್ಟಿಟ್ಟ ಬುತ್ತಿಯೇ ಆಗಿರುತ್ತದೆ.
ಅಲ್ಲದೆ ರಾತ್ರಿ ಮತ್ತು ಬೆಳಗ್ಗೆ ಸರಿಯಾಗಿ ಹಲ್ಲುಗಳನ್ನು ಬ್ರಷ್ ಮಾಡದೇ ಮಲಗಿಸುವುದು, ಹೆಚ್ಚು ಹೊತ್ತು ಹಾಲಿನ ಬಾಟಲಿಗಳನ್ನು ಬಾಯಲ್ಲಿ ಇಟ್ಟುಕೊಳ್ಳುವುದರಿಂದ ಹಲ್ಲಿನ ಸಮಸ್ಯೆಗಳು ಮಕ್ಕಳಲ್ಲಿ ದೀರ್ಘಕಾಲದವರೆಗೂ ಕಾಡುತ್ತದೆ.
ಮಕ್ಕಳ ಹಲ್ಲಿನ ಸುರಕ್ಷತೆಗೆ ಹೀಗೆ ಮಾಡಿ:
ಮುಖ್ಯವಾಗಿ ಪ್ರತಿ ಮಗುವಿಗೆ ಹಾಲುಣಿಸುವ ಅವಧಿಯ ನಂತರ, ಬಾಯಿ ಮತ್ತು ಒಸಡುಗಳ ಒಳಭಾಗವನ್ನು ನಿಧಾನವಾಗಿ ಸ್ವಚ್ಛಗೊಳಿಸಬೇಕು. ಮಗುವಿಗೆ ಬಳಸುವ ಟೂತ್ ಬ್ರಷ್‌ಗಳ ಮೂಲಕ ದಿನನಿತ್ಯ ಹಲ್ಲುಗಳನ್ನು ನಿಧಾನವಾಗಿ ಉಜ್ಜಬೇಕು.
ಹೆಚ್ಚು ಕೋಲ್ಡ್‌ಡ್ರಿಂಕ್ಸ್, ರಾಸಾಯನಿಕಯುಕ್ತ ಜಂಕ್‌ಫುಡ್‌ಗಳು, ಕೃತಕ ಸಿಹಿ ಕಾರಗಳ ಆಹಾರಗಳನ್ನು ಆದಷ್ಟು ನೀಡಬೇಡಿ.
ಹಾಲು ಹಲ್ಲುಗಳನ್ನು ಕ್ಯಾವಿಟೀಸ್ ಆಗದಂತೆ ಜೋಪಾನ ಮಾಡಿಕೊಂಡರೆ ಶಾಶ್ವತ ಹಲ್ಲುಗಳನ್ನು ಹುಳುಕಾಗದಂತೆ ಕಾಪಾಡಬಹುದಾಗಿದೆ. ಹೀಗಾಗಿ ಮಲಗುವಾಗ ಹಾಲಿನ ಬಾಟಲಿಗಳನ್ನು ನೀಡಬೇಡಿ. ಮಕ್ಕಳ ಹಲ್ಲಿನ ಬಣ್ಣದಲ್ಲಿ ಬದಲಾವಣೆ ಕಾಣಿಸಿಕೊಂಡ ತಕ್ಷಣ ದಂತ ವೈದ್ಯರನ್ನು ಸಂಪರ್ಕಿಸಿ. ದಿನಕ್ಕೆ ಎರಡು ಬಾರಿ ಹಲ್ಲನ್ನು ಉಜ್ಜುವಂತೆ ನೋಡಿಕೊಳ್ಳಿ.