ಆರೋಗ್ಯವಾಗಿರಲು ದಿನಕ್ಕೊಂದು ಮೂಸಂಬಿ ಹಣ್ಣನ್ನು ಸೇವಿಸಿ. ಸಿಟ್ರಸ್ ಜಾತಿಯ ಹಣ್ಣಿನ ಗುಂಪಿಗೆ ಸೇರಿರುವ ಈ ಮೂಸಂಬಿ ಹಣ್ಣು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ಆರೋಗ್ಯದ ಹಲವಾರು ಸಮಸ್ಯೆಗಳನ್ನು ದೂರ ಮಾಡುತ್ತದೆ.
ಸಿಟ್ರಸ್ ಜಾತಿಗೆ ಸೇರಿರುವ ಹಣ್ಣುಗಳಲ್ಲಿ, ಮೂಸಂಬಿ ಕೂಡ ಒಂದು. ತನ್ನಲ್ಲಿ ಯಥೇಚ್ಛವಾಗಿ ನೀರಿನಾಂಶ ಹೊಂದಿರುವ ಈ ಹಣ್ಣು ಹಲವಾರು ಬಗೆಯ ಪೌಷ್ಟಿಕ ಸತ್ವಗಳನ್ನು ಒಳಗೊಂಡಿದೆ. ಈ ಹಣ್ಣು ತುಂಬಾನೇ ತಂಪು ಎನ್ನುವ ಒಂದೇ ಕಾರಣ ಬಿಟ್ಟರೆ, ಉಳಿದೆಲ್ಲಾ ವಿಷ್ಯದಲ್ಲೂ ಕೂಡ, ಇದು ತುಂಬಾನೇ ಆರೋಗ್ಯಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ವಿಶೇಷವಾಗಿ ಈ ಹಣ್ಣಿನಲ್ಲಿ ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ವಿಟಮಿನ್‍ಗಳು ಹಾಗೂ ಖನಿಜಾಂಶಗಳು ಅಗಾಧ ಪ್ರಮಾಣದಲ್ಲಿ ಸಿಗುವುದರಿಂದ ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿಂದ ಹಿಡಿದು, ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು, ಪಾರ್ಶ್ವವಾಯು, ಆರೋಗ್ಯವನ್ನು ಕಾಪಾಡುವ ಎಲ್ಲ ಗುಣಲಕ್ಷಣಗಳು ಈ ಹಣ್ಣಿನಲ್ಲಿ ಕಂಡು ಬರುತ್ತದೆ. ಇನ್ನು ಈ ಹಣ್ಣನ್ನು ಹಾಗೆ ತಿನ್ನಬಹುದು ಅಥವಾ ಅದರ ಜ್ಯೂಸ್ ಮಾಡಿಕೊಂಡು ಕುಡಿಯಬಹುದು.
ಈ ಹಣ್ಣಿನಲ್ಲಿರುವ ವಿಟಮಿನ್ ಸಿ ಅಂಶವು ಮೂಳೆಗಳ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ಸಂಧಿವಾತದಂತಹ ಸಮಸ್ಯೆ ನಿವಾರಣೆ ಮಾಡುವುದು, ಜೊತೆಗೆ ದೇಹದ ಮೂಳೆಗಳ ಆರೋಗ್ಯವನ್ನು ಸುಧಾರಿಸುವುದು. ಸ್ನಾಯು ಸೆಳೆತ ಕಡಿಮೆ ಆಗುತ್ತದೆ.
ನಾವು ಸೇವಿಸುವ ಆಹಾರ ಸರಿಯಾಗಿ ಜೀರ್ಣವಾಗದೇ ಇದ್ದರೆ ಮುಂದಿನ ದಿನಗಳಲ್ಲಿ ಅಜೀರ್ಣ-ಮಲಬದ್ಧತೆ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಸರಿಯಾಗಿ ಜೀರ್ಣಕ್ರಿಯೆ ಪ್ರಕ್ರಿಯೆಯಾಗಬೇಕೆಂದರೆ ಪ್ರತಿದಿನ ಊಟವಾದ ಬಳಿಕ, ಅರ್ಧ ಮೂಸಂಬಿ ಹಣ್ಣನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಯಾಕೆಂದರೆ ಈ ಹಣ್ಣಿನಲ್ಲಿರುವ ಫ್ಲಾವನಾಯ್ಡ್ ಎನ್ನುವ ಅಂಶಗಳು ಜೀರ್ಣ ಕ್ರಿಯೆ ರಸವನ್ನು ಉತ್ತೇಜಿಸಿ ಜೀರ್ಣಕ್ರಿಯೆ ಪ್ರಕ್ರಿಯೆ ಸರಿಯಾಗಿ ನಡೆಯುವಂತೆ ಸಹಕರಿಸುವುದು.
ಅಷ್ಟೇ ಅಲ್ಲದೆ ಕರುಳಿನ ಕ್ರಿಯೆಗಳು ಸರಾಗವಾಗಿ ದೇಹದಲ್ಲಿ ಶೇಖರಣೆಗೊಂಡಿರುವ ವಿಷಕಾರಿ ಅಂಶ ವನ್ನು ಹೊರಗೆ ಹಾಕುವುದು. ಇನ್ನು ಅಜೀರ್ಣ ಸಮಸ್ಯೆ ಎದುರಾಗಿ ವಾಂತಿ ಅಥವಾ ವಾಕರಿಕೆ ಸಮಸ್ಯೆ ಇದ್ದವರು, ಈ ಹಣ್ಣನ್ನು ಸೇವನೆ ಮಾಡುವುದರಿಂದ ಪರಿಹಾರ ಸಿಗಲಿದೆ.
ಕೆಲವೊಮ್ಮೆ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಪದೇ ಪದೇ ಶೀತ, ಕೆಮ್ಮು, ಜ್ವರದಂತಹ ಸಮಸ್ಯೆಗಳು ಕಂಡು ಬಂದರೆ ಅಥವಾ ಬಾಯಿ ಹುಣ್ಣು ಕಾಣಿಸಿಕೊಂಡರೆ ಇಲ್ಲಾಂದ್ರೆ ಬಾಯಿಯ ಒಸಡುಗಳಲ್ಲಿ ರಕ್ತ ಸ್ರಾವದ ಸಮಸ್ಯೆಗಳು ಇದ್ದರಿಗೆ ಈ ಮೂಸಂಬಿ ಹಣ್ಣು ಬಹಳ ಒಳ್ಳೆಯದು ಎಂದು ಸಾಬೀತಾಗಿದೆ. ಇದಕ್ಕೆ ಮುಖ್ಯ ಕಾರಣ ಈ ಹಣ್ಣಿನಲ್ಲಿ ಕಂಡು ಬರುವ ವಿಟಮಿನ್ ಸಿ ಅಂಶ.
ಒಂದೆರಡು ಚಮಚ ಮೂಸಂಬಿ ಹಣ್ಣಿನ ರಸಕ್ಕೆ, ಚಿಟಿಕೆಯಷ್ಟು ಕಪ್ಪು ಉಪ್ಪನ್ನು ಬೆರೆಸಿ, ರಕ್ತಸ್ರಾವ ವಾಗುತ್ತಿರುವ ಒಸಡಿನ ಮೇಲೆ ಹಚ್ಚಿಕೊಳ್ಳಬೇಕು. ಇಲ್ಲಾಂದರೆ ಬಾಯಿಹುಣ್ಣು ಆಗಿರುವಂತಹ ಜಾಗಕ್ಕೆ ಹಚ್ಚಿಕೊಂಡರೆ, ಸಮಸ್ಯೆಗೆ ಪರಿಹಾರ ಕಾಣಬಹುದಾಗಿದೆ. ಇನ್ನು ಒಂದು ವೇಳೆ ಬಾಯಿ ದುರ್ವಾಸನೆ ಬರುತ್ತಿದ್ದರೆ ಮೂಸಂಬಿ ಜ್ಯೂಸ್ ಸೇವನೆ ಮಾಡಿ ಇಲ್ಲಾಂದರೆ ಈ ಹಣ್ಣಿನ ಸಿಪ್ಪೆಯ ಸಣ್ಣ ತುಂಡನ್ನು ಜಗಿಯುವ ಅಭ್ಯಾಸ ಮಾಡಿಕೊಳ್ಳಿ.
ಮೊದಲೇ ಹೇಳಿದ ಹಾಗೆ ಈ ಹಣ್ಣಿನಲ್ಲಿ ಫ್ಲಾವನಾಯ್ಡ್ ಎನ್ನುವ ಆರೋಗ್ಯಕಾರಿ ಅಂಶ ಯಥೇಚ್ಛವಾಗಿ ಕಂಡು ಬರುವುದರಿಂದ ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳು ಬೆಳವಣಿಗೆ ಆಗದಂತೆ ನೋಡಿಕೊಳ್ಳುವ ಗುಣಲಕ್ಷಣಗಳನ್ನು ಒಳಗೊಂಡಿದೆ.
ಅಷ್ಟೇ ಅಲದೆ ಈ ಹಣ್ಣು ಆಂಟಿ ಆಕ್ಸಿಡೆಂಟ್ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಒಳಗೊಂಡಿರುವ ಜೊತೆಗೆ ವಿಟಮಿನ್ ಸಿ ಅಂಶ ಕೂಡ ಹೇರಳವಾಗಿ ಕಂಡು ಬರುವುದರಿಂದ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಕ್ಯಾನ್ಸರ್ ವಿರುದ್ಧ ಹೋರಾಡಲು ನೆರವಾಗುತ್ತದೆ.