ಚಂಡೀಗಢ : ಸಿಎಂ ಹುದ್ದೆ ಪಡೆಯಲು 500 ಕೋಟಿ ರೂ. ಕೊಡಬೇಕು ಎಂಬ ಕಾಂಗ್ರೆಸ್ ನಾಯಕಿ ನವಜೋತ್ ಕೌರ್ ಸಿಧು ಹೇಳಿಕೆ ಪಂಜಾಬ್‌ನಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರನ್ನು ಭೇಟಿಯಾದ ನಂತರ ಅವರ ನೀಡಿದ ಹೇಳಿಕೆ ಬಿಜೆಪಿ ಮತ್ತು ಎಎಪಿಯಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಅಷ್ಟೇ ಅಲ್ಲದೇ ಪಕ್ಷದೊಳಗೆ ತೀವ್ರ ಅಸಮಾಧಾನವನ್ನು ಉಂಟುಮಾಡಿವೆ.
ಪಕ್ಷವು 2027ರ ವಿಧಾನಸಭಾ ಚುನಾವಣೆಗೆ ತಮ್ಮ ಪತಿ, ಮಾಜಿ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿದರೆ ಮಾತ್ರ ಅವರು ಸಕ್ರಿಯ ರಾಜಕೀಯಕ್ಕೆ ಮರಳಲು ಪರಿಗಣಿಸುತ್ತಾರೆ ಎಂದು ನವಜೋತ್ ಕೌರ್ ಹೇಳಿದ್ದಾರೆ. ನನ್ನ ಪತಿಯನ್ನು ಸಿಎಂ ಅಭ್ಯರ್ಥಿಯನ್ನಾಗಿ ಬಿಂಬಿಸುವುದು ಅನುಮಾನ. ರಾಜ್ಯ ಕಾಂಗ್ರೆಸ್‌ನಲ್ಲಿ ತೀವ್ರ ಆಂತರಿಕ ಕಲಹವಿದ್ದು, ಈಗಾಗಲೇ ಹಲವು ನಾಯಕರು ಉನ್ನತ ಹುದ್ದೆಗೆ ಲಾಬಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಾವು ಯಾವಾಗಲೂ ಪಂಜಾಬ್ ಪರವಾಗಿಯೇ ಮಾತನಾಡುತ್ತೇವೆ. ಆದರೆ ಸಿಎಂ ಕುರ್ಚಿಗೆ ಕುಳಿತುಕೊಳ್ಳಲು 500 ಕೋಟಿ ರೂ. ನೀಡುವುದಿಲ್ಲ. ಅಧಿಕಾರಕ್ಕೆ ಬರಲು ಹಣ ನೀಡುವವರೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ. ಆಪ್ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನ ನಿಜವಾದ ಕಾರ್ಯತಂತ್ರ ಏನು ಎನ್ನುವುದು ಗೊತ್ತಾಗಿದೆ. ಈ ಮೊತ್ತವನ್ನು ಯಾರೂ ಪಾವತಿಸುತ್ತಾರೆ ಮತ್ತು ಯಾರು ಸ್ವೀಕರಿಸುತ್ತಾರೆ ಎನ್ನುವುದು ಬಹಿರಂಗವಾಗಬೇಕಿದೆ ಎಂದು ಆಗ್ರಹಿಸಿದೆ.
ಬಿಜೆಪಿ ಒಂದು ಹೆಜ್ಜೆ ಮುಂದೆ ಹೋಗಿ ಹೈಕಮಾಂಡ್ ಮೇಲೆಯೇ ಆರೋಪ ಮಾಡಿದೆ. ಕಾಂಗ್ರೆಸ್ ಮುಖ್ಯಮಂತ್ರಿ ನೇಮಕಾತಿಗಳನ್ನು ಹರಾಜಾಗಿ ಪರಿವರ್ತಿಸಿದೆ ಎಂದು ಹೇಳಿದೆ. ಸುಧಾಂಶು ತ್ರಿವೇದಿ ಪ್ರತಿಕ್ರಿಯಿಸಿ, ಷ್ಟಾಚಾರದಲ್ಲಿ ಕೊರಳೊಡ್ಡಿರುವ ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರದ ರೋಗವು ಈ ಮಟ್ಟಕ್ಕೆ ತಲುಪಿದೆ. ದೇಶವಾಗಲಿ, ಸಂವಿಧಾನವಾಗಲಿ, ಪಕ್ಷವಾಗಲಿ ಅವರ ಕೈಯಲ್ಲಿ ಸುರಕ್ಷಿತವಾಗಿಲ್ಲ ಎಂದು ಕಿಡಿಕಾರಿದರು.
ಟಿಕೆಟ್ ವಿತರಣೆ ಮತ್ತು ನಾಯಕತ್ವದಲ್ಲಿ ಉನ್ನತ ಹುದ್ದೆ ಪಡೆಯಲು ಹಣ ನೀಡಬೇಕು ಎಂದು ಕಾಂಗ್ರೆಸ್‌ನ ಇತರ ಸದಸ್ಯರು ಮಾಡಿದ್ದ ಆರೋಪಗಳು ಸಿಧು ಅವರ ಹೇಳಿಕೆಯಿಂದ ಮತ್ತೊಮ್ಮೆ ದೃಢಪಟ್ಟಿದೆ ಎಂದು ಬಿಜೆಪಿ ಹೇಳಿದೆ.















