ಬೆಂಗಳೂರು (Bengaluru)-ಹುಬಳ್ಳಿಯ ತಾರಿಹಾಳ ಬೈಪಾಸ್ ನಲ್ಲಿ ಸಂಭವಿಸಿದ ಭೀಕರ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕಂಬನಿ ಮಿಡಿದಿದ್ದಾರೆ.
ಟ್ವೀಟ್ ಮಾಡಿರುವ ಮೋದಿ ಅವರು, ಹುಬ್ಬಳ್ಳಿಯಲ್ಲಿ ನಡೆದಿರುವ ಅಪಘಾತವು ಮನಸ್ಸಿಗೆ ನೋವನ್ನುಂಟು ಮಾಡಿದೆ. ಅವರ ಕುಟುಂಬದ ನೋವಿನಲ್ಲಿ ನಾನೂ ಭಾಗಿ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದಿದ್ದಾರೆ.
ಜೊತೆಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್‌ಆರ್‌ಎಫ್) ಮೃತರ ಕುಟುಂಬದವರಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.
ಪ್ರಧಾನಿ ಟ್ವೀಟ್ ಬೆನ್ನಲ್ಲೇ ಪರಿಹಾರ ಘೋಷಿಸಿದ್ದಕ್ಕಾಗಿ ಧನ್ಯವಾದ ಸಲ್ಲಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು, ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ರೂ. ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಟ್ವೀಟ್ ಮಾಡಿದ್ದಾರೆ.
ಇದರೊಂದಿಗೆ, ಮೃತರ ಕುಟುಂಬದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ತಲಾ 7 ಲಕ್ಷ ರೂ. ಪರಿಹಾರ ಸಿಕ್ಕಂತಾಗಿದೆ.
ತಾರಿಹಾಳ ಬೈಪಾಸ್ ನಲ್ಲಿ ಬಸ್ ಹಾಗೂ ಟ್ರಕ್ ನಡುವೆ ಸಂಭವಿಸಿದ್ದ ಮುಖಾಮುಖಿ ಡಿಕ್ಕಿಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು, 28 ಮಂದಿ ಗಾಯಗೊಂಡಿದ್ದಾರೆ.