ಮನೆ ಅಪರಾಧ ಹುಬ್ಬಳ್ಳಿ: ಕೊಲೆಯಾದ 24 ಗಂಟೆಯೊಳಗೆ ಹಂತಕರ ಬಂಧನ

ಹುಬ್ಬಳ್ಳಿ: ಕೊಲೆಯಾದ 24 ಗಂಟೆಯೊಳಗೆ ಹಂತಕರ ಬಂಧನ

0

ಹುಬ್ಬಳ್ಳಿ: ನಗರದ ಹೊರವಲಯದ ತಾರಿಹಾಳ ಗ್ರಾಮದ ತೋಟವೊಂದರಲ್ಲಿ ರವಿವಾರ ತಡರಾತ್ರಿ ಸಾರಾಯಿ ವಿಷಯವಾಗಿ ಓರ್ವನಿಗೆ ಕೊಲೆ ಮಾಡಿದ್ದ ಮೂವರು ಹಂತಕರನ್ನು ಗ್ರಾಮೀಣ ಠಾಣೆ ಪೊಲೀಸರು 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Join Our Whatsapp Group

ಪ್ರಕರಣದಲ್ಲಿ ಧಾರವಾಡ ತಾಲೂಕು ಇಟಿಗಟ್ಟಿ ಗ್ರಾಮದ ಪ್ರವೀಣ ಕುಬಿಹಾಳ, ಹನಮಂತ ಮಾಳಗಿಮನಿ, ಸಹದೇವ ನೂಲ್ವಿ ಬಂಧಿತರಾದವರು.

ಇವರು ತಾರಿಹಾಳದ ಬಾರ್ ಹತ್ತಿರವಿರುವ ಚಿಕ್ಕು ತೋಟದಲ್ಲಿ ಮೂಲತಃ ಕುಂದಗೋಳ ತಾಲೂಕು ಇಂಗಳಗಿ ಗ್ರಾಮದ ಇಲ್ಲಿನ ತಾರಿಹಾಳ ವಾಜಪೇಯಿ ನಗರದ ಷಣ್ಮುಖಪ್ಪ ಬಸಪ್ಪ ಹಡಪದ (55) ಬೀಯರ್ ಬಾಟಲಿ ಅಥವಾ ಇನ್ನಾವುದೋ ಹರಿತವಾದ ಆಯುಧದಿಂದ‌ ತಲೆಗೆ ಹೊಡೆದು ಕೊಲೆ ಮಾಡಿದ್ದರು. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಎಸ್ ಪಿ ಡಾ. ಗೋಪಾಲ ಬ್ಯಾಕೋಡ, ಹೆಚ್ಚುವರಿ ಎಸ್ ಪಿ ಎನ್.ವಿ. ಭರಮನಿ, ಡಿಎಸ್ ಪಿ ಶಿವಾನಂದ ಕಟಗಿ ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆ ಇನ್ಸಪೆಕ್ಟರ್ ಮುರಗೇಶ ಚನ್ನಣ್ಣವರ, ಪಿಎಸ್ಐಗಳಾದ ಸಚಿನ ಆಲಮೇಲಕರ, ಅಭಿಜಿತ, ಎಎಸ್‌ಐಗಳಾದ ಎನ್.ಎಂ. ಹೊನ್ನಪ್ಪನವರ, ನಾರಾಯಣ ಹಿರೇಹೊಳಿ ಹಾಗೂ ಸಿಬ್ಬಂದಿಗಳಾದ ಎ.ಎ. ಕಾಕರ, ಚನ್ನಪ್ಪ ಬಳ್ಳೊಳ್ಳಿ, ಸಿ.ಬಿ. ಜನಗಣ್ಣವರ, ನಾಗಪ್ಪ ಸಂಶಿ, ವೈ.ಡಿ. ಕುಂಬಾರ, ನಾಗರಾಜ ಮಾಣಿಕ, ಪ್ರೇಮನಾಥ ಹಾಗೂ ತಾಂತ್ರಿಕ ಸಿಬ್ಬಂದಿಗಳಾದ ಆರೀಫ ಗೋಲಂದಾಜ, ವಿಠಲ ಅವರನ್ನೊಳಗೊಂಡ ತನಿಖಾ ತಂಡ ಹಂತಕರನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಸಾರಾಯಿ ಕುಡಿಯುವ ವಿಷಯಕ್ಕೆ ಸಂಬಂಧಿಸಿದಂತೆ ಜಗಳ ಮಾಡಿ ಕೊಲೆ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹಂತಕರಿಂದ ಕೃತ್ಯಕ್ಕೆ ಬಳಸಿದ ಒಂದು ಬೈಕ್, ನಾಲ್ಕು ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಕೊಲೆ ಪ್ರಕರಣ ಭೇದಿಸಿದ ವಿಶೇಷ ತನಿಖಾ ತಂಡಕ್ಕೆ ಎಸ್ ಪಿ ಬಹುಮಾನ ಘೋಷಿಸಿದ್ದಾರೆ.