ಮನೆ ರಾಜ್ಯ ಹುಬ್ಬಳ್ಳಿ: ಪಾಲಿಕೆ ಎದುರು ತ್ಯಾಜ್ಯ ಸುರಿದು ಗುತ್ತಿಗೆ ಪೌರಕಾರ್ಮಿಕರ ಪ್ರತಿಭಟನೆ

ಹುಬ್ಬಳ್ಳಿ: ಪಾಲಿಕೆ ಎದುರು ತ್ಯಾಜ್ಯ ಸುರಿದು ಗುತ್ತಿಗೆ ಪೌರಕಾರ್ಮಿಕರ ಪ್ರತಿಭಟನೆ

0

ಹುಬ್ಬಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿರುವ ಗುತ್ತಿಗೆ ಪೌರಕಾರ್ಮಿಕರು ಗುರುವಾರ ಕಚೇರಿ ಆರಂಭದ ಸಮಯದಲ್ಲಿ ಪಾಲಿಕೆ ಕಚೇರಿ ಮುಖ್ಯ ಪ್ರವೇಶದ್ವಾರದಲ್ಲಿ ನಗರದ ತ್ಯಾಜ್ಯ ಸುರಿದು ಪ್ರತಿಭಟನೆ ನಡೆಸಿದರು.

Join Our Whatsapp Group

ಕಳೆದ ಎಂಟು ದಿನಗಳಿಂದ ಪಾಲಿಕೆ ಕಚೇರಿ ಮುಂಭಾಗದಲ್ಲಿ ಗುತ್ತಿಗೆ ಪೌರಕಾರ್ಮಿಕರನ್ನು ನೇರವೇತನ ಪಾವತಿ ಅಡಿಯಲ್ಲಿ ತರಬೇಕು. ಪೌರ ಕಾರ್ಮಿಕರ ಸಂಘಕ್ಕೆ ಪಾಲಿಕೆ ಆವರಣದಲ್ಲಿ ಕೊಠಡಿ ನೀಡುವಂತೆ ಪ್ರತಿಭಟನೆ ನಡೆಸುತ್ತಿದ್ದರು. ನಿತ್ಯ ಒಂದಲ್ಲಾ ಒಂದು ಮಾದರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಗುತ್ತಿಗೆ ಪೌರಕಾರ್ಮಿಕರು ಇಂದು ಕಚೇರಿ ಆರಂಭದ ವೇಳೆಯಲ್ಲಿ ನಗರದಲ್ಲಿ ಸಂಗ್ರಹಿಸಿದ್ದ ತ್ಯಾಜ್ಯವನ್ನು ಟ್ರ್ಯಾಕ್ಟರ್ ಮೂಲಕ ತಂದು ಮುಖ್ಯ ದ್ವಾರದಲ್ಲಿ ಸುರಿದು ಆಕ್ರೋಶ ವ್ಯಕ್ತಪಡಿಸಿದರು.

ಮುನ್ನೆಚ್ಚರಿಕಾ ಕ್ರಮವಾಗಿ ನಿಯೋಜಿಸಿದ್ದ ಪೊಲೀಸರು ಮಳೆಯ ಕಾರಣ ಅಣತಿ ದೂರದಲ್ಲಿ ಇದ್ದರು. ತಡೆಯುವ ನಿಟ್ಟಿನಲ್ಲಿ ಪೊಲೀಸರು ಮುಂದಾದರೂ ಕ್ಷಣಾರ್ಧದಲ್ಲಿ ಟ್ರ್ಯಾಕ್ಟರ್ ಕಸ ಸುರಿದ ಘಟನೆ ನಡೆಯಿತು.

ಕಸ ಸುರಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಅಧಿಕಾರಿಗಳು ಕೂಡಲೇ ಖಾಯಂ ಪೌರ ಕಾರ್ಮಿಕರನ್ನು ಕರೆಯಿಸಿ ಸ್ವಚ್ಛಗೊಳಿಸುವ ಕೆಲಸಕ್ಕೆ ಮುಂದಾದರು. ನಂತರ ಜೆಸಿಬಿ ಮೂಲಕ ಕಸ ತುಂಬಿಸಿ ಜಟ್ಟಿಂಗ್ ಯಂತ್ರದ ಮೂಲಕ ನೀರಿನಿಂದ ಸ್ವಚ್ಛಗೊಳಿಸಿದರು. ಘಟನೆಗೆ ಹಾಗೂ ಮುಜುಗರಕ್ಕೆ ಕಾರಣವಾದ ಟೆಂಡರ್ ಮೂಲಕ ಪಡೆದ ಟ್ರ್ಯಾಕ್ಟರ್ ಟೆಂಡರ್ ರದ್ದು ಮಾಡುವ ಕುರಿತು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದು, ಸರಕಾರಿ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ಇತರೆ ಕಾರಣಗಳ ಮೇಲೆ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಚಿಂತನೆ ನಡೆಸಿದ್ದಾರೆ.

ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಹೆಚ್ಚಿನ ಪೊಲೀಸರನ್ನು ಕರೆಸಲಾಗುತ್ತಿದೆ. ಟ್ರ್ಯಾಕ್ಟರ್ ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.