ಬೆಂಗಳೂರು: ಬಿಜೆಪಿಯವರು ಆರ್ ಎಸ್ ಎಸ್ ಸೇರಿದಂತೆ ತಮ್ಮ ಸಂಸ್ಥೆಗಳಿಗೆ ನೂರಾರು ಎಕರೆ ಸರ್ಕಾರಿ ಜಾಗ ಪರಭಾರೆ ಮಾಡಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ತಮ್ಮ ಪಕ್ಷ ಹಾಗೂ ಪಕ್ಷದ ಸಿದ್ಧಾಂತ ಬೆಳವಣಿಗೆಗೆ ಹೀಗೆ ಮಾಡಿದ್ದು , ಕಾನೂನು ಉಲ್ಲಂಘಿಸಿ ಭೂಮಿ ನೀಡಿರುವುದರ ಕುರಿತು ಸಿಎಂ ಹಾಗೂ ಕಂದಾಯ ಇಲಾಖೆ ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 108 ಟೆಂಡರ್ ಗಳನ್ನ ರದ್ದು ಪಡಿಸಿದ್ದೇವೆ. ರಾಜ್ಯದ ಡಯಾಲಿಸಿಸ್ ಕೇಂದ್ರಗಳಲ್ಲಿ ಅವ್ಯವಸ್ಥೆ ಇದೆ. ಹಾಗಾಗಿ ರಾಜ್ಯದಲ್ಲಿ ಡಯಾಲಿಸಿಸ್ ಟೆಂಡರ್ ಗಳನ್ನು ರದ್ದುಪಡಿಸಿದ್ದೇವೆ. ಮುಂದಿನ ಮೂರು ವಾರಗಳಲ್ಲಿ ಟೆಂಡರ್ ಕರೆಯುತ್ತೇವೆ. ಅಧಿಕಾರಿಗಳು, ವೈದ್ಯರ ಕಾರ್ಯ ನಿರ್ವಹಣೆ ಸರಿಪಡಿಸಬೇಕಿದೆ. ಸಾಮಾನ್ಯ ಜನರಿಗೆ ಗುಣಮಟ್ಟದ ಚಿಕಿತ್ಸೆ ಕೊಡಿಸುತ್ತೇವೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಬಿಜೆಪಿಯವರು ಇತಿಹಾಸ ತಿರುಚುವ ಕೆಲಸ ಮಾಡಿದ್ದಾರೆ. ಅಧಿಕಾರದಲ್ಲಿದ್ದಾಗ ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದರು. ಇದೇ ಕಾರಣಕ್ಕೆ ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ್ದರು ಎಂದು ಕಿಡಿಕಾರಿದರು.