ಹುಣಸೂರು(Hunsur): ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡು ಹಂದಿಯನ್ನು ಹುಲಿಯೊಂದು ಬೆನ್ನಟ್ಟಿ ಬೇಟೆಯಾಡಿದ ದೃಶ್ಯವನ್ನು ಪ್ರವಾಸಿಗರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ.
ಸಫಾರಿ ವೇಳೆಯಲ್ಲಿ ಅತೀ ಹೆಚ್ಚು ಹುಲಿಗಳನ್ನು ಕಣ್ತುಂಬಿಕೊಳ್ಳಲು ಸಿಗುವ ದಮ್ಮನಕಟ್ಟೆ ಅರಣ್ಯ ವಲಯದಲ್ಲಿ ಘಟನೆ ನಡೆದಿದೆ.
ದಮ್ಮನಕಟ್ಟೆ ಅರಣ್ಯ ವಲಯದಲ್ಲಿ ಪ್ರವಾಸಿಗರ ವಾಹನದ ಮುಂದೆಯೇ ಕಾಡುಹಂದಿಯನ್ನು ಹುಲಿ ಅಟ್ಟಾಡಿಸಿದೆ. ಕಾಡು ಹಂದಿ ಎಷ್ಟೇ ದೂರ ಓಡಿದರೂ ಹುಲಿ ಛಲ ಬಿಡದೆ ಬೇಟೆಯಾಡಿದ್ದು, ಆ ದೃಷ್ಯವನ್ನು ಪ್ರವಾಸಿಗರು ಸೆರೆ ಹಿಡಿದಿದ್ದಾರೆ.
ನಾಗರಹೊಳೆಯ ವೀರನ ಹೊಸಹಳ್ಳಿ, ನಾಣಚ್ಚಿ ಗೇಟ್ ಹಾಗೂ ದಮ್ಮನಕಟ್ಟೆಯಿಂದ ಪ್ರವಾಸಿಗರಿಗೆ ಸಫಾರಿಗೆ ಅವಕಾಶ ಕಲ್ಪಿಸಲಾಗಿದೆ. ವೀರನ ಹೊಸಹಳ್ಳಿ ಮತ್ತು ನಾಣಚ್ಚಿ ಗೇಟ್ ಸಫಾರಿ ಪ್ರದೇಶಗಳಿಗಿಂತ ದಮ್ಮನಕಟ್ಟೆಯಲ್ಲಿ ಪ್ರವಾಸಿಗರಿಗೆ ನಿತ್ಯ ಹುಲಿ ದರ್ಶನವಾಗುತ್ತಿದೆ. ಹೀಗಾಗಿ ಇಲ್ಲಿ ಸಫಾರಿಗೆ ಬೇಡಿಕೆಯೂ ಹೆಚ್ವಿದೆ.
ಕಾಡಿನಲ್ಲಿ ಆಹಾರ ಅರಸುತ್ತಾ ಅಡ್ಡಾಡುತ್ತಿದ್ದ ಕಾಡು ಹಂದಿಗೆ ದುತ್ತನೆ ಎದುರಾದ ಹುಲಿ ಕಂಡು ಜೀವ ಉಳಿಸಿಕೊಳ್ಳುವ ಸಲುವಾಗಿ ಓಡಿದರೂ ಪ್ರಯೋಜನವಾಗಲಿಲ್ಲ. ಸುಮಾರು ಎರಡು ನಿಮಿಷ ಕಾಲ ಕಾಡು ಹಂದಿ ಹೋರಾಟ ನಡೆಸಿದರೂ ಹುಲಿ ಕಾಡು ಹಂದಿಯನ್ನು ಬೇಟೆಯಾಡಿ ತನ್ನ ಹಸಿವನ್ನು ನೀಗಿಸಿಕೊಂಡಿದೆ.