ಹುಣಸೂರು: ಎರಡು ಕಾರುಗಳ ನಡುವೆ ಮುಖಾಮುಕಿ ಡಿಕ್ಕಿ ಸಂಭವಿಸಿ ಒರ್ವ ಮೃತಪಟ್ಟು, ಐವರಿಗೆ ತೀವ್ರ ಗಾಯವಾಗಿರುವ ಘಟನೆ ಹೆದ್ದಾರಿಯ ಜಡಗನಕೊಪ್ಪಲು ಗೇಟ್ ಬಳಿ ನ.9ರ ಶನಿವಾರ ನಡೆದಿದೆ.
ನಗರದ ಸರಸ್ವತಿಪುರಂ ನಿವಾಸಿ ರಾಚಯ್ಯನ ಪುತ್ರ ಸಂಜಯ್ (38) ಮೃತ ಪಟ್ಟ ವ್ಯಕ್ತಿ. ಸ್ನೇಹಿತರಾದ ನವೀನ, ಹರೀಶ, ನಿತಿನ್, ರಾಮಪಟ್ಟಣದ ರಾಮೇಗೌಡ ಗಾಯಗೊಂಡು ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದು ಕಾರಿನ ಚಾಲಕನಿಗೂ ತೀವ್ರಗಾಯಗಳಾಗಿದೆ.
ಘಟನೆ ವಿವರ: ಸಂಜಯ್ ತನ್ನ ಕಾರಿನಲ್ಲಿ ಸ್ನೇಹಿತರೊಂದಿಗೆ ಬಿಳಿಕೆರೆ ಬಳಿಯ ಹೊಸಲು ಮಾರಮ್ಮ ದೇವಾಲಯದಲ್ಲಿ ನಡೆದಿದ್ದ ಬರ್ತ್ ಡೇಗೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆ ಜಡಗನಕೊಪ್ಪಲು ಗೇಟ್ ಬಳಿ ಹುಣಸೂರು ಕಡೆಯಿಂದ ಬರುತ್ತಿದ್ದಕಾರು ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಚಾಲಕ ಸಂಜಯ್ ಹಾಗೂ ಕಾರಿನಲ್ಲಿದ್ದ ನಾಲ್ವರಿಗೂ ತೀವ್ರ ಗಾಯಗಳಾಗಿತ್ತು. ದಾರಿಯಲ್ಲಿ ತೆರಳುತ್ತಿದ್ದ ವಾಹನ ಸವಾರರು ಸಂಜಯ್ ನನ್ನು ಮೈಸೂರು ಆಸ್ಪತ್ರೆಗೆ ಸಾಗಿಸಿದರಾದರೂ ಅದಾಗಲೇ ಸಾವನ್ನಪ್ಪಿದ್ದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬಿಳಿಕೆರೆ ಠಾಣೆ ಇನ್ಸ್ ಪೆಕ್ಟರ್ ಲೋಲಾಕ್ಷಿ ಹಾಗೂ ಸಿಬ್ಬಂದಿಗಳು, ಪೊಲೀಸರು ಇತರೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಅಪಘಾತದಿಂದಾಗಿ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದಾಗಿ ಕೆಲಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿತ್ತು.