ಹುಣಸೂರು: ಕಸಾಯಿಖಾನೆಗೆ ಸಾಗಿಸಲು ಜಾನುವಾರುಗಳನ್ನು ಕೂಡಿ ಹಾಕಿದ್ದ ಗೋಡೌನ್ ಮೇಲೆ ಮದ್ಯರಾತ್ರಿಯಲ್ಲಿ ಸಿನಿಮೀಯ ಮಾದರಿ ದಾಳಿ ನಡೆಸಿರುವ ಹುಣಸೂರು ಪೊಲೀಸರು ಒಂದು ಹಾಲಿನ ವ್ಯಾನ್ ಸೇರಿದಂತೆ ಮೂರು ಗೂಡ್ಸ್ ವಾಹನಗಳಲ್ಲಿ ತುಂಬಿದ್ದ 40 ಜಾನುವಾರುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಣಸೂರು ತಾಲೂಕಿನ ರತ್ನಪುರಿಯ ಅಲ್ತಾಫ್, ಶಾಬುದ್ದೀನ್ ಎಂಬವರಿಗೆ ಸೇರಿದ ಮನೆ ಪಕ್ಕದ ಗೋಡೌನ್‌ನಲ್ಲಿ ಜಾನುವಾರುಗಳು ಪತ್ತೆಯಾಗಿದ್ದು, ಜಾನುವಾರುಗಳನ್ನು ತುಂಬಿದ್ದ ಮೂರು ಗೂಡ್ಸ್ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ರತ್ನಪುರಿಯ ಅಲ್ತಾಫ್, ಶಾಬುದ್ದೀನ್ ಎಂಬವರ ಮನೆ ಬಳಿಯ ಗೋಡೌನ್‌ನಲ್ಲಿ ಜಾನುವಾರುಗಳನ್ನು ಕೂಡಿ ಹಾಕಿದ್ದು, ಇಲ್ಲಿಂದ ಕಸಾಯಿಖಾನೆಗೆ ಸಾಗಿಸುತ್ತಿದ್ದಾರೆಂಬ ಮಾಹಿತಿ ಮೇರೆಗೆ ಅಡಿಷನಲ್ ಎಸ್.ಪಿ. ಡಾ.ನಂದಿನಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಗೋಪಾಲಕೃಷ್ಣರ ಮಾರ್ಗದರ್ಶನದಲ್ಲಿ ಹುಣಸೂರು ನಗರ ಠಾಣೆ ಇನ್ಸ್ ಪೆಕ್ಟರ್ ಸಂತೋಷ್ ಕಶ್ಯಪ್, ಎಸ್.ಐ.ಗಳಾದ ರಾಮಚಂದ್ರ ನಾಯ್ಕ, ಅಚ್ಚುತ್ತನ್ ಹಾಗೂ ಸಿಬ್ಬಂದಿಗಳು ಬುಧವಾರ ಮದ್ಯರಾತ್ರಿ 2 ಗಂಟೆ ವೇಳೆಯಲ್ಲಿ ದಾಳಿ ನಡೆಸಿದ್ದಾರೆ.
ಜಾನುವಾರುಗಳನ್ನು ತುಂಬಿಸಿ ಕಸಾಯಿ ಖಾನೆಗೆ ಸಾಗಿಸಲು ತಯಾರಿ ಮಾಡಿದ್ದ ಮೂರು ಗೂಡ್ಸ್ ವಾಹನಗಳ ಸಹಿತ ಜಾನುವಾರುಗಳನ್ನು ರಕ್ಷಿಸಿ, ಪ್ರಕರಣ ದಾಖಲಿಸಿಕೊಂಡು ಪಿಂಜಾರಪೋಲ್ ಗೆ ಬಿಡಲಾಗಿದೆ.
ಹಾಲಿನ ವಾಹನವನ್ನು ಯಾರೂ ಎಲ್ಲಿಯೂ ತಪಾಸಣೆ ಮಾಡುವುದಿಲ್ಲವಾಗಿದ್ದ ಕಾರಣ ಇದೀಗ ಹಸುಗಳನ್ನು ಹಾಲಿನ ವಾಹನದಲ್ಲೂ ಸಾಗಿಸುತ್ತಿರುವುದು ಕಂಡುಬಂದಿದೆ.