ಹುಣಸೂರು: ನಾಗರಹೊಳೆ ಉದ್ಯಾನವನದಲ್ಲಿ ವನ್ಯಜೀವಿಗಳನ್ನು ಬೇಟೆಯಾಡಲು ಹೊಂಚು ಹಾಕುತ್ತಿದ್ದ ಕಳ್ಳ ಬೇಟೆಗಾರರ ತಂಡವನ್ನು ಅರಣ್ಯ ಸಿಬ್ಬಂದಿಗಳು ಸಿನಿಮೀಯಾ ಮಾದರಿಯಲ್ಲಿ ಕಾರ್ಯಾಚರಣೆ ನಡೆಸಿ ಅಯುಧ ಸಹಿತ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರೆ, ಮೂವರು ಪರಾರಿಯಾಗಿದ್ದಾರೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ನಾಲ್ವೇರಿ ಗ್ರಾಮದ ಎಂ.ಕಾವೇರಪ್ಪ ಕೆ.ಕೆ, ಕೋತೂರಿನ ಆಕರ್ಷ.ವಿ.ಆರ್ ಬಂಧಿತ ಆರೋಪಿಗಳು. ಕೃತ್ಯ ನಡೆಸಲು ಬಳಸಿದ್ದ ಓಮಿನಿ ಕಾರು, ಎಸ್.ಬಿ.ಬಿ.ಎಲ್ ಒಂಟಿ ನಳಿಕೆ ಬಂದೂಕು, ಚೂರಿ, ಕತ್ತಿ, ಮೊಬೈಲ್-ಸಿಮ್‌ಕಾರ್ಡ್ ವಶಪಡಿಸಿಕೊಂಡಿದ್ದಾರೆ. ಕೊತೂರಿನ ಬೋಪಣ್ಣ, ಅಭಿ, ರಂಜು ಒಂಟಿ ನಳಿಕೆ ಬಂದೂಕು ಹಾಗೂ ಕಾಡತೂಸುಗಳೊಂದಿಗೆ ಪರಾರಿಯಾಗಿದ್ದಾರೆ.
ಹುಣಸೂರು ವನ್ಯಜೀವಿ ವಲಯ ವ್ಯಾಪ್ತಿಯ ಕಚುವಿನಹಳ್ಳಿ ಮೀಸಲು ಅರಣ್ಯಪ್ರದೇಶದಂಚಿನಲ್ಲಿ ಘಟನೆ ನಡೆದಿದ್ದು, ಏ.10ರ ಬುಧವಾರ ರಾತ್ರಿ ಆನೆಚೌಕೂರು ಅರಣ್ಯ ಪ್ರದೇಶದಲ್ಲಿ ಸಿಬ್ಬಂದಿ ರಾತ್ರಿ ಗಸ್ತಿನಲ್ಲಿದ್ದ ವೇಳೆ ಹುಣಸೂರು-ಗೋಣಿಕೊಪ್ಪ ಮುಖ್ಯರಸ್ತೆಯ ಜಡೇ ಆಲದಮರದ ಗೇಟ್ ಬಳಿ ಒಮಿನಿಯೊಂದು ನಿಂತಿದ್ದು, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕಚುವಿನಹಳ್ಳಿ ರಾಜ್ಯ ಮೀಸಲು ಅರಣ್ಯದೊಳಗೆ ಐದು ಮಂದಿಯ ತಂಡ ವನ್ಯಪ್ರಾಣಿಯನ್ನು ಬೇಟೆಯಾಡಲು ಸಂಶಯಾಸ್ಪದವಾಗಿ ಹೊಂಚು ಹಾಕುತ್ತಿದ್ದರು. ತಕ್ಷಣವೇ ಕಾರ್ಯಪ್ರವೃತರಾದ ಅರಣ್ಯ ಸಿಬ್ಬಂದಿಯನ್ನು ಕಂಡ ಬೇಟೆಗಾರರು ತಪ್ಪಿಸಿಕೊಳ್ಳಲು ಒಮಿನಿಯನ್ನೇರಿ ಪರಾರಿಯಾಗಲೆತ್ನಿಸಿದಾಗ ಸಿಬ್ಬಂದಿಗಳು ಸಿನಿಮೀಯಾ ಮಾದರಿಯಲ್ಲಿ ಬೆನ್ನಟ್ಟಿ ಪಿರಿಯಾಪಟ್ಟಣ-ಬೆಟ್ಟದಪುರ ಮುಖ್ಯ ರಸ್ತೆಯ ಸಿ.ಸಿ.ಕಾಂಪ್ಲೆಕ್ಸ್ ಬಳಿ ಆರೋಪಿಗಳಿಬ್ಬರನ್ನು ಕೃತ್ಯಕ್ಕೆ ಬಳಸುವ ಪರಿಕರಗಳೊಂದಿಗೆ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ಉದಯವಾಣಿ ತಿಳಿಸಿದ್ದಾರೆ.
ಎಸಿಎಫ್ ದಯಾನಂದ್ ಮಾರ್ಗದರ್ಶನದಲ್ಲಿ ಕಾರ್ಯಚರಣೆಯಲ್ಲಿ ಡಿಆರ್‌ಎಫ್‌ಒ ರಾಮಣ್ಣ.ಪಿ.ಎಲ್ ಸೇರಿದಂತೆ ಗಸ್ತು ಅರಣ್ಯಪಾಲಕರು ಹಾಗೂ ಎಪಿಸಿ ಸಿಬ್ಬಂದಿ ಭಾಗವಹಿದ್ದರು.