ಮನೆ ಕಾನೂನು ಪತ್ನಿ ತಕ್ಕಷ್ಟು ಸಂಪಾದಿಸುತ್ತಿದ್ದ ಮಾತ್ರಕ್ಕೆ ಮಗು ಸಲಹುವ ಹೊಣೆಯಿಂದ ಪತಿ ತಪ್ಪಿಸಿಕೊಳ್ಳಲಾಗದು: ಪಂಜಾಬ್ ಹೈಕೋರ್ಟ್

ಪತ್ನಿ ತಕ್ಕಷ್ಟು ಸಂಪಾದಿಸುತ್ತಿದ್ದ ಮಾತ್ರಕ್ಕೆ ಮಗು ಸಲಹುವ ಹೊಣೆಯಿಂದ ಪತಿ ತಪ್ಪಿಸಿಕೊಳ್ಳಲಾಗದು: ಪಂಜಾಬ್ ಹೈಕೋರ್ಟ್

0

ಪತ್ನಿ ಸಾಕಷ್ಟು ಸಂಪಾದನೆ ಮಾಡುತ್ತಿದ್ದ ಮಾತ್ರಕ್ಕೆ ಮಗು ಪಾಲಿಸುವ ಹೊಣೆಯಿಂದ ಪತಿ ಸ್ವಯಂಚಾಲಿತವಾಗಿ ತಪ್ಪಿಸಿಕೊಳ್ಳುವಂತಿಲ್ಲ ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.

Join Our Whatsapp Group

ಪಾಲನೆ ಪೋಷಣೆಗೆ ಸಾಕಷ್ಟು ಅವಕಾಶಗಳಿರುವ ತಾಯಿಯ ಬಳಿಯೇ ತನ್ನ ಮಗಳು ಇರುವುದರಿಂದ ಆ ಮಗಳನ್ನು ನೋಡಿಕೊಳ್ಳಲು ತಾನು ಜವಾಬ್ದಾರನಲ್ಲ ಎಂಬ ಪತಿಯ ವಾದ ತಿರಸ್ಕರಿಸಿದ ನ್ಯಾಯಮೂರ್ತಿ ಸುಮೀತ್ ಗೋಯೆಲ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಯಿ ಕೆಲಸ ಮಾಡುತ್ತಿದ್ದ ಮಾತ್ರಕ್ಕೆ, ತಂದೆ ಮಗುವಿನ ಜವಾಬ್ದಾರಿ ತೆಗೆದುಕೊಳ್ಳುವುದರಿಂದ ಮುಕ್ತನಾಗುತ್ತಾನೆ ಎಂದರ್ಥವಲ್ಲ ಎಂದು ನ್ಯಾಯಾಲಯ ಹೇಳಿದೆ.

ಸಿಆರ್‌ಪಿಸಿ ಸೆಕ್ಷನ್‌ 125 ಎಂಬುದು ಮಹಿಳೆಯರು ಮತ್ತು ಮಕ್ಕಳನ್ನು ಸಂಭಾವ್ಯ ಆಶ್ರಯರಾಹಿತ್ಯತೆ ಮತ್ತು ನಿರ್ಗತಿಕ ಜೀವನದಿಂದ ರಕ್ಷಿಸುವ ಸಾಮಾಜಿಕ ಸಾಧನವಾಗಿದೆ. ಪತಿ ಇಲ್ಲವೇ ತಂದೆಗೆ ಸಾಕಷ್ಟು ಜೀವನೋಪಾಯದ ಮಾರ್ಗಗಳಿದ್ದಾಗ ಆತ ತನ್ನ ಹೆಂಡತಿ ಮತ್ತು ಮಕ್ಕಳನ್ನು ರಕ್ಷಿಸಿಕೊಳ್ಳಲು ಬದ್ಧನಾಗಿದ್ದು ನೈತಿಕ ಮತ್ತು ಕೌಟುಂಬಿಕ ಜವಾಬ್ದಾರಿಗಳಿಂದ ದೂರ ಇರುವಂತಿಲ್ಲ ಎಂದು ಏಕಸದಸ್ಯ ಪೀಠ ತಿಳಿಸಿದೆ.

ತನ್ನ ಅಪ್ರಾಪ್ತ ಮಗಳನ್ನು ಸಲಹುವುದಕ್ಕಾಗಿ ₹7,000 ಮಧ್ಯಂತರ ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಂಶ ತಿಳಿಸಿದೆ.

ತನಗೆ ಮಾಸಿಕ ಕೇವಲ ₹ 22 ಸಾವಿರ ಆದಾಯ ಇದ್ದು, ಕುಟುಂಬದ ಆರು ಮಂದಿ ಅವಲಂಬಿತರಾಗಿದ್ದಾರೆ. ಮಗಳನ್ನು ಸಲಹಲು ಆಕೆಯ ತಾಯಿಗೆ ಸಾಕಷ್ಟು ಮಾರ್ಗಗಳಿವೆ ಎಂದು ಆತ ತಿಳಿಸಿದ್ದರು.

ವಾದ ಆಲಿಸಿದ ನ್ಯಾಯಾಲಯ ತಾನು ಈಗ ನೀಡಿರುವ ಮಧ್ಯಂತರ ಜೀವನಾಂಶ ಆದೇಶ ಅಂತಿಮ ತೀರ್ಪಿಗೆ ಒಳಪಟ್ಟಿದೆ ಎಂದು ಹೇಳಿದೆ.

ವ್ಯಕ್ತಿಯ ಆರ್ಥಿಕ ಸಾಮರ್ಥ್ಯ ಮಾತ್ರವಲ್ಲದೆ ಮಗುವನ್ನು ಬೆಳೆಸಲು ಬೇಕಾದ ಸಮಗ್ರ ಯತ್ನಗಳ ಬಗ್ಗೆಯೂ ಕೌಟುಂಬಿಕ ನ್ಯಾಯಾಲಯ ತಿಳಿಸಿದೆ. ಈ ಸಮಗ್ರ ಯತ್ನ ಇಬ್ಬರೂ ಪೋಷಕರಿಂದ ನಡೆಯಬೇಕು ಎಂದು ಅದು ಹೇಳಿದೆ. ಹೀಗಾಗಿ ಕೌಟುಂಬಿಕ ನ್ಯಾಯಾಲಯ ನೀಡಿರುವ ಮಧ್ಯಂತರ ಜೀವನಾಂಶ ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಹೈಕೋರ್ಟ್‌ ಹೇಳಿದೆ. ಅಂತೆಯೇ ಮಗುವಿನ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಅದು ವಜಾಗೊಳಿಸಿದೆ.