ತುಮಕೂರು : ವಿಚ್ಛೇದನ ಬಯಸಿದ ಪತ್ನಿಗೆ ಪತಿ ಮಚ್ಚಿನೇಟು ಕೊಟ್ಟು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಕೋಟೆಯಲ್ಲಿ ನಡೆದಿದೆ. ದಂಪತಿ ನಡುವೆ ನಿನ್ನೆ ಗಲಾಟೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪತಿಯ ಮಚ್ಚಿನೇಟಿನಿಂದ ಗಾಯಗೊಂಡಿರುವ ಪತ್ನಿ ನಾಗಮಣಿ ಸಾವು ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಪತಿ ಮಾರುತಿ, ಇಂದು ಬೆಳಗ್ಗೆ ಕೊರಟಗೆರೆ ತಾಲ್ಲೂಕಿನ ದೊಡ್ಡನಹಳ್ಳಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೈಸೂರಿನ ಸರ್ಕಾರಿ ಆಸ್ಪತ್ರೆಯ ನರ್ಸ್ ಆಗಿರುವ ನಾಗಮಣಿ ಹಾಗೂ ಮಾರುತಿ ಕಳೆದ 15 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಈ ದಂಪತಿಗೆ ಎರಡು ಮಕ್ಕಳು ಸಹ ಇವೆ. ಮಾರುತಿ ವೃತ್ತಿಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದರೆ, ನಾಗಮಣಿಗೆ ಮದುವೆ ನಂತರ ಸರ್ಕಾರಿ ನರ್ಸ್ ಕೆಲಸ ಸಿಕ್ಕಿತ್ತು.
ಆದರೆ, ಯಾವಾಗ ನಾಗಮಣಿಗೆ ಸರ್ಕಾರಿ ನರ್ಸ್ ಕೆಲಸ ಒಲಿದುಬಂತೋ ಅಂದಿನಿಂದ ಆಕೆಯ ಜೀವನ ಶೈಲಿಯೇ ಬದಲಾಗಿದ್ದು, ಗಾರೆ ಕೆಲಸ ಮಾಡಿಕೊಂಡಿದ್ದ ಪತಿ ಮಾರುತಿಯಿಂದ ನಾಗಮಣಿ ವಿವಾಹ ವಿಚ್ಛೇದನ ಪಡೆದುಕೊಳ್ಳಲು ಚಿಂತನೆ ನಡೆಸಿದ್ದಳು.
ಇನ್ನೊಂದೆಡೆ ನಾಗಮಣಿಗೆ ಮತ್ತೊಬ್ಬನ ಜೊತೆ ಸಂಬಂಧ ಇರುವ ಬಗ್ಗೆ ಮಾರುತಿಗೆ ಅನುಮಾನ ಬಂದಿದ್ದು, ಇದೇ ವಿಚಾರವಾಗಿ ಗಲಾಟೆ ಮಾಡಿದ್ದ. ಅಲ್ಲದೇ ಈ ಗಂಡ ಹೆಂಡತಿ ಜಗಳ ಮೈಸೂರಿನ ಸ್ಥಳೀಯ ಠಾಣೆ ಮೆಟ್ಟಿಲೇರಿತ್ತು. ಇದಾದ ಬಳಿಕ ಮೊನ್ನೆ ಗಂಡನ ಜೊತೆ ಕೋಟೆಯಲ್ಲಿ ವಾಸವಾಗಿದ್ದ ಮಕ್ಕಳ ನೋಡಲು ನಾಗಮಣಿ ಬಂದಿದ್ದಳು.
ಈ ವೇಳೆ ದಂಪತಿ ನಡುವೆ ಮತ್ತೆ ಗಲಾಟೆಯಾಗಿದ್ದು, ಈ ಸಂದರ್ಭದಲ್ಲಿ ಮಾರುತಿ, ಮಚ್ಚಿನಿಂದ ನಾಗಮಣಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಬಳಿಕ ಸ್ಥಳೀಯರು ಗಾಯಾಳು ನಾಗಮಣಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ನಾಗಮಣಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ.
ಇನ್ನೊಂದೆಡೆ ಪತಿ ಮಾರುತಿ ಇಂದು ಕೊರಟಗೆರೆ ತಾಲ್ಲೂಕಿನ ದೊಡ್ಡನಹಳ್ಳಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















