ಹಾವೇರಿ : ಪತ್ನಿ, ಅತ್ತೆ-ಮಾವನ ಕಿರುಕುಳಕ್ಕೆ ಬೇಸತ್ತು ವೀಡಿಯೋ ಮಾಡಿಟ್ಟು ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ವರಹ ಗ್ರಾಮದಲ್ಲಿ ನಡೆದಿದೆ. ಮಂಜುನಾಥ್ ಚಿಲ್ಲೋಜಿ (26) ಆತ್ಮಹತ್ಯೆ ಮಾಡಿಕೊಂಡ ಪತಿ. ಮೂಲತಃ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ನಿವಾಸಿಯಾಗಿರುವ ಮಂಜುನಾಥ್ ಕುರಿಗಾಹಿಯಾಗಿದ್ದರು.
ಪತ್ನಿ, ಅತ್ತೆ-ಮಾವ ಮತ್ತು ಅವರ ಮಾವ ಹೊನ್ನಸಿದ್ದಪ್ಪ ಹಾಗೂ ರಾಜಪ್ಪ ಕಿರುಕುಳಕ್ಕೆ ಬೇಸತ್ತು ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಮಂಜುನಾಥ್ ವೀಡಿಯೋ ಮಾಡಿಟ್ಟು ಕಿರುಕುಳದ ಬಗ್ಗೆ ವಿವರಿಸಿದ್ದಾರೆ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಮಾನಸಿಕವಾಗಿ ಬಹಳ ಹಿಂಸೆ ನೀಡಿದ್ದಾರೆ.
ನನ್ನ ಹೆಂಡತಿ, ಅವರ ತಂದೆ-ತಾಯಿ, ಅವರ ಮಾವ ಭೀರಪ್ಪ, ಹೊನ್ನಸಿದ್ದಪ್ಪ ಹಾಗೂ ರಾಜಪ್ಪ ಮಾನಸಿಕವಾಗಿ ತುಂಬಾ ಹಿಂಸೆ ಕೊಟ್ಟಿದ್ದಾರೆ. ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಕಣ್ಣೀರು ಹಾಕಿದ್ದಾರೆ. ಘಟನೆ ಸಂಬಂಧ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














