ಯಾದಗಿರಿ: ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬೆಂಕಿಯಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಯಾದಗಿರಿ ನಗರ ಪೊಲೀಸರು ರೌಡಿಶೀಟರ್ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.
ರೌಡಿಶೀಟರ್ ಬಾಬುಗೌಡ ಅಗತೀರ್ಥ ಮತ್ತು ಮಂಜುಳಾ ಗೂಳಿಯ ಪತಿ, ಆರೋಪಿ ಶಂಕರ್ ಗೂಳಿ ಬಂಧಿತರು. ಘಟನೆ ಸಂಬಂಧ ದೂರು ದಾಖಲಾಗುತ್ತಿದ್ದಂತೆ ರೌಡಿಶೀಟರ್ ಬಾಬುಗೌಡ ಅಗತೀರ್ಥ ವಿಜಯವಾಡದಲ್ಲಿನ ತನ್ನ ಗೆಳೆಯನ ಮನೆಯಲ್ಲಿ ಅಡಗಿಕೊಂಡಿದ್ದನು. ಈ ವಿಚಾರ ತಿಳಿದು, ವಿಜಯವಾಡಕ್ಕೆ ತೆರಳಿದ ಯಾದಗಿರಿ ನಗರ ಪೊಲೀಸರು ಆರೋಪಿ ಬಾಬುಗೌಡನನ್ನು ಸೆರೆ ಹಿಡಿದಿದ್ದಾರೆ.
ಮಂಜುಳಾ ಗೂಳಿ ಅವರು ಕಳೆದ 13 ವರ್ಷಗಳಿಂದ ಯಾದಗಿರಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾಗಿದ್ದರು. ಆದರೆ ಪಕ್ಷವು ಹೊಸ ಮುಖಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ನಿಲೋಫರ್ ಬಾದಲ್ ಎಂಬುವವರನ್ನು ನೂತನ ಅಧ್ಯಕ್ಷೆಯಾಗಿ ನೇಮಕಮಾಡಿತು. ಈ ನಿರ್ಧಾರ ಶಂಕರ್ ಗೂಳಿಗೆ ಇಷ್ಟವಾಗದೇ, ಅವರು ತೀವ್ರವಾಗಿ ರೋಷಗೊಂಡಿದ್ದರು.
ಮೇ 24ರಂದು ರಾತ್ರಿ 1 ಗಂಟೆ ಸುಮಾರಿಗೆ ಶಂಕರ್ ಗೂಳಿ ತನ್ನ ಬೆಂಬಲಿಗನಾದ ಬಾಬುಗೌಡ ಅಗತೀರ್ಥನೊಂದಿಗೆ ಸೇರಿ, ಸುಮಾರು ಐದು ಲೀಟರ್ ಪೆಟ್ರೋಲ್ ಖರೀದಿ ಮಾಡಿ, ಯಾದಗಿರಿಯಲ್ಲಿರುವ ಕಾಂಗ್ರೆಸ್ ಕಚೇರಿ ಮೇಲೆ ಬೆಂಕಿ ಹಚ್ಚಿದರು. ರಾತ್ರಿ ವೇಳೆ, ಕಚೇರಿಯ ಹೊರಗಿನಿಂದ ಪೆಟ್ರೋಲ್ ಸುರಿದು, ಲೈಟರ್ ಮೂಲಕ ಬೆಂಕಿ ಹಚ್ಚಿದ ಹಿನ್ನೆಲೆ ಕಚೇರಿಯಲ್ಲಿದ್ದ ಸೋಫಾ, ಎಸಿ ಸೇರಿದಂತೆ ಹಲವು ವಸ್ತುಗಳನ್ನು ಸಂಪೂರ್ಣ ಸುಟ್ಟುಹೋಗಿದ್ದವು.
ಸ್ಥಳದಲ್ಲಿ ತಕ್ಷಣವೇ ಪರಿಶೀಲನೆ ನಡೆಸಿದ ಯಾದಗಿರಿ ನಗರ ಠಾಣೆ ಪೊಲೀಸರು, ಬೆರಳಚ್ಚು ತಜ್ಞರ ಸಹಾಯದಿಂದ ಸಾಕ್ಷ್ಯ ಸಂಗ್ರಹ ಆರಂಭಿಸಿದರು. ಆದರೆ ಕ್ರಿಮಿನಲ್‌ಗಳ ಗುರುತು ಸಿಸಿಟಿವಿ ಮೂಲಕ ಪತ್ತೆಯಾಯಿತು. ಕಚೇರಿಯ ಎದುರಿನ ಅಂಗಡಿಯೊಂದರಲ್ಲಿ ಸ್ಥಾಪಿತವಾಗಿದ್ದ ಕ್ಯಾಮೆರಾದ ದೃಶ್ಯವಿಷ್ಲೇಷಣೆಯಿಂದಾಗಿ, ಶಂಕರ್ ಹಾಗೂ ಬಾಬುಗೌಡ ಇಬ್ಬರ ಕೃತ್ಯ ಬಹಿರಂಗವಾಯಿತು. ಪೊಲೀಸರು ತಕ್ಷಣವೇ ಶಂಕರ್ ಗೂಳಿಯನ್ನು ಬಂಧಿಸಿ, ವಿಜಯವಾಡದಲ್ಲಿ ಅಡಗಿದ್ದ ಬಾಬುಗೌಡನನ್ನು ಕೂಡ ಸೆರೆಹಿಡಿದರು.
ಶಂಕರ್ ಗೂಳಿ, ವೃತ್ತಿಯಿಂದ ಸರ್ಕಾರಿ ಮಹಿಳಾ ಪಿಯು ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, ತಮ್ಮ ಸ್ಥಾನಮಾನವನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂಬುದಾಗಿ ಸಾರ್ವಜನಿಕರು ಆಘಾತ ವ್ಯಕ್ತಪಡಿಸುತ್ತಿದ್ದಾರೆ.














