ಕೋಲ್ಕತ್ತಾ: ತನ್ನ ಕುಟುಂಬಸ್ಥರ ವಿರೋಧದ ನಡುವೆಯೂ 10ನೇ ತರಗತಿ ಪರೀಕ್ಷೆ ಬರೆದಳು ಎಂಬ ಕಾರಣಕ್ಕೆ ಆಕ್ರೋಶಗೊಂಡ ಪತಿ ಮಹಾಶಯ ‘ಅಪ್ರಾಪ್ತ ಪತ್ನಿ’ ಮೇಲೆ ಆ್ಯಸಿಡ್ ಎರಚಿರುವ ಘಟನೆ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ನಡೆದಿದೆ.
ಪರೀಕ್ಷಾ ಕೇಂದ್ರದ ಎದುರೇ ಪಾಪಿ ಪತಿ ಪತ್ನಿ ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾನೆ. ಘಟನೆಯಲ್ಲಿ ಪತ್ನಿಯ ಮುಖ ಮತ್ತು ದೇಹದ ಮೇಲ್ಭಾಗದಲ್ಲಿ ತೀವ್ರ ಸುಟ್ಟ ಗಾಯಗಳಾಗಿದ್ದು, ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಪಾಪಿ ಪತಿಯನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯನ್ನು ಈತ ಮದುವೆಯಾಗಿದ್ದ. ಮದುವೆ ಬಳಿಕ ಓದು ಬೇಡ ಎಂದು ಆತನ ಕುಟುಂಬಸ್ಥರು ಹೇಳಿದ್ದರು. ಆದರೆ ಶಿಕ್ಷಣದಲ್ಲಿ ಆಸಕ್ತಿ ಇದ್ದ ಅಪ್ರಾಪ್ತ ಬಾಲಕಿ ಮಗುವಿನ ತಾಯಿಯಾದ ಬಳಿಕ ತನ್ನ ಹೆತ್ತವರ ಮನೆಗೆ ಹೋಗಿ ಅಲ್ಲಿಂದಲೇ ಈ ವರ್ಷದ ಮಾಧ್ಯಮಿಕ ಪರೀಕ್ಷೆಗೆ ಹಾಜರಾಗುತ್ತಿದ್ದಳು. ಈ ವಿಷಯವನ್ನು ಅರಿತು ಆಕ್ರೋಶಗೊಂಡ ಪಾಪಿ ಪತಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಜಗಳ ಮಾಡಿ ಆಕೆಯ ಮೇಲೆ ಆ್ಯಸಿಡ್ ಎರಚಿದ್ದಾನೆ.
ಈ ಬಗ್ಗೆ ಪೊಲೀಸರ ಬಳಿ ಸಂತ್ರಸ್ಥೆ ಹೇಳಿಕೆ ದಾಖಲಿಸಿದ್ದು, ‘ಮೊದಲಿನಿಂದಲೂ, ನನ್ನ ಪತಿ ಮಾಧ್ಯಮಿಕ ಪರೀಕ್ಷೆಗೆ ಹಾಜರಾಗುವ ನನ್ನ ನಿರ್ಧಾರವನ್ನು ವಿರೋಧಿಸುತ್ತಿದ್ದರು. ನಾನು ನನ್ನ ತಂದೆಯ ಮನೆಯಿಂದ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ. ಮಂಗಳವಾರ ಬೆಳಿಗ್ಗೆ, ನನ್ನ ಪತಿ ನನಗೆ ಕರೆ ಮಾಡಿ ನನ್ನ ಪರೀಕ್ಷಾ ಕೇಂದ್ರ ಎಲ್ಲಿದೆ ಎಂದು ತಿಳಿಯಲು ಬಯಸಿದ್ದರು. ನಾನು ಪರೀಕ್ಷಾ ಕೇಂದ್ರಕ್ಕೆ ಬಂದಾಗ ಇದ್ದಕ್ಕಿದ್ದಂತೆ ಅವರು ಕಾಣಿಸಿಕೊಂಡರು ಮತ್ತು ಪರೀಕ್ಷಾ ಕೇಂದ್ರವನ್ನು ಪ್ರವೇಶಿಸದಂತೆ ನನ್ನನ್ನು ಕೇಳಿದರು. ಆದರೆ ಕೊನೆಯ ಪರೀಕ್ಷೆಯಾದ್ದರಿಂದ ನಾನು ಪರೀಕ್ಷೆಗೆ ಹಾಜರಾಗುತ್ತೇನೆ ಎಂದು ಹೇಳಿದೆ. ಇದ್ದಕ್ಕಿದ್ದಂತೆ, ಅವನು ತನ್ನ ಜೇಬಿನಿಂದ ಬಾಟಲಿಯನ್ನು ತೆಗೆದುಕೊಂಡು ನನ್ನ ಮುಖ ಮತ್ತು ದೇಹದ ಮೇಲೆ ಆ್ಯಸಿಡ್ ಎರಚಿದ. ನಾನು ನೆಲಕ್ಕೆ ಕುಸಿದು ಪ್ರಜ್ಞಾಹೀನಳಾದೆ ಎಂದು ಹೇಳಿದ್ದಾರೆ.
ಬಾಲಕಿಯನ್ನು ಭೇಟಿಯಾಗಲು ತಂಡವನ್ನು ತಕ್ಷಣವೇ ಕಳುಹಿಸಲಾಗಿದೆ ಎಂದು ಬಿರ್ಭುಮ್‌ನಲ್ಲಿರುವ ಕೌನ್ಸಿಲ್ ಆಫ್ ಸೆಕೆಂಡರಿ ಎಜುಕೇಶನ್‌ನ ಸದಸ್ಯ ಹೇಳಿದರು.
‘ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು. ಹುಡುಗಿ ಕೊನೆಯ ಪರೀಕ್ಷೆಗೆ ಹಾಜರಾಗಬೇಕೆಂದು ನಾವು ಬಯಸಿದ್ದೇವೆ. ನಾವು ಪರೀಕ್ಷೆಯನ್ನು ತಡವಾಗಿ ಪ್ರಾರಂಭಿಸಲು ಸಿದ್ಧತೆಗಳನ್ನು ಕೈಗೊಂಡಿದ್ದೇವೆ. ಆದ್ದರಿಂದ ಆಕೆ ಪರೀಕ್ಷೆ ಬರೆಯಬಹುದು. ಆದರೆ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ.