ಹೊಸದಿಲ್ಲಿ(New Delhi): ತೆಲಂಗಾಣದ ಪಶುವೈದ್ಯೆಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಅಮಾನುಷ ಹತ್ಯೆ ಆರೋಪಿಗಳ ಎನ್‌ಕೌಂಟರ್‌ಗೆ ಉದ್ದೇಶಪೂರ್ವಕ ಎಂದು ಸಿರ್ಪುರ್ಕಾರ್ ಆಯೋಗದ ವರದಿ ಸಲ್ಲಿಸಿದೆ.
ಎನ್‌ಕೌಂಟ್ ಘಟನೆಯ ತನಿಖೆ ನಡೆಸಲು ಸುಪ್ರೀಂಕೋರ್ಟ್ ನೇಮಿಸಿದ ಆಯೋಗವು ತನ್ನ ವರದಿ ಸಲ್ಲಿಸಿದ್ದು, ಈ ಎನ್‌ಕೌಂಟರ್ ಪೊಲೀಸರ ಸೃಷ್ಟಿ ಎಂದು ತಿಳಿಸಿದೆ.
ಹೈದರಾಬಾದ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳ ಮೇಲೆ “ಅವರನ್ನು ಸಾಯಿಸುವುದಕ್ಕಾಗಿಯೇ ಉದ್ದೇಶಪೂರ್ವಕವಾಗಿ ಗುಂಡು ಹಾರಿಸಲಾಗಿತ್ತು”ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹತ್ಯೆಯಾದ ನಾಲ್ವರು ಆರೋಪಿಗಳಲ್ಲಿ ಮೂವರು ಅಪ್ರಾಪ್ತ ವಯಸ್ಸಿನವರು ಎಂದು ವರದಿ ಹೇಳಿದೆ. ಈ ಪ್ರಕರಣದ ತನಿಖೆಯಲ್ಲಿ ಸಾಕಷ್ಟು ಲೋಪಗಳಿವೆ ಎಂದು ತೋರಿಸಿರುವ ಆಯೋಗ, ಕೊಲೆ ಆರೋಪದಲ್ಲಿ 10 ಮಂದಿ ಪೊಲೀಸರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಶಿಫಾರಸು ಮಾಡಿದೆ.
ನಮ್ಮ ಒಟ್ಟಾರೆ ಅಭಿಪ್ರಾಯದ ಪ್ರಕಾರ, ಆರೋಪಿಗಳ ಮೇಲೆ ಅವರನ್ನು ಸಾಯಿಸುವ ಸಲುವಾಗಿ ಉದ್ದೇಶಪೂರ್ವಕವಾಗಿ ಗುಂಡು ಹಾರಿಸಲಾಗಿದೆ ಮತ್ತು ಗುಂಡಿನ ದಾಳಿಯು ಮೃತ ಶಂಕಿತರ ಸಾವಿನ ಫಲಿತಾಂಶ ನೀಡುವುದು ಖಚಿತ ಎಂಬ ತಿಳಿವಳಿಕೆಯೊಂದಿಗೇ ಮಾಡಲಾಗಿದೆ ಎಂದು ಆಯೋಗದ ವರದಿ ತಿಳಿಸಿದೆ.
ಈ ವರದಿ ಸಲ್ಲಿಕೆಯ ಬಳಿಕ ಅದರ ಆಧಾರದಲ್ಲಿ ಕ್ರಮ ತೆಗೆದುಕೊಳ್ಳುವಂತೆ ತೆಲಂಗಾಣ ಹೈಕೋರ್ಟ್‌ಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
2019ರ ನವೆಂಬರ್‌ನಲ್ಲಿ ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ (ದಿಶಾ ಪ್ರಕರಣ) ಸಂಬಂಧಿಸಿದಂತೆ ಮೊಹಮದ್ ಆರಿಫ್, ಜೋಲು ಶಿವ, ಜೋಲು ನವೀನ್ ಮತ್ತು ಚಿಂತಕುಂಟ ಚೆನ್ನಕೇಶವುಲು ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು. ಅದರ ಬೆನ್ನಲ್ಲೇ ಅವರ ಎನ್‌ಕೌಂಟರ್ ಕೂಡ ನಡೆದಿತ್ತು. ಘಟನೆಯ ಮರು ಸೃಷ್ಟಿ ಕಾರ್ಯಕ್ಕೆ ಕರೆದೊಯ್ದಿದ್ದಾಗ ಆರೋಪಿಗಳು ಪೊಲೀಸರ ಮೇಲೆ ದಾಳಿ ಮಾಡಿ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಅದಕ್ಕಾಗಿ ಅವರ ಮೇಲೆ ಗುಂಡು ಹಾರಿಸಬೇಕಾಯಿತು ಎಂದು ಪೊಲೀಸರು ತಿಳಿಸಿದ್ದರು. ಈ ಸಂಬಂಧ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಎನ್‌ಕೌಂಟರ್ ಬಗ್ಗೆ ತನಿಖೆ ನಡೆಸುವಂತೆ ಮೂವರು ಸದಸ್ಯರ ಆಯೋಗವನ್ನು ಸುಪ್ರೀಂಕೋರ್ಟ್ ನೇಮಕ ಮಾಡಿತ್ತು.
2019ರ ಡಿಸೆಂಬರ್ 6ರಂದು, ಶಸ್ತ್ರಾಸ್ತ್ರ ಕಸಿಯುವುದು, ಪೊಲೀಸರ ಮೇಲೆ ಹಲ್ಲೆ ಮತ್ತು ಗುಂಡು ಹಾರಿಸುವಂತಹ ಘಟನೆಗೆ ಸಂಬಂಧಿಸಿದಂತೆ ಮೃತರು ಯಾವುದೇ ಅಪರಾಧ ಕೃತ್ಯ ಎಸಗಿರಲಿಲ್ಲ ಎಂದು ಸಂಪೂರ್ಣ ಮಾಹಿತಿಗಳನ್ನು ದಾಖಲು ಮಾಡಿಕೊಂಡ ಬಳಿಕ ನಾವು ತೀರ್ಮಾನಿಸಿದ್ದೇವೆ ತನಿಖಾ ಆಯೋಗ ತಿಳಿಸಿದೆ.