ವಿಜಯಪುರ: ನಾನು ಫೈಟರ್, ಎಲ್ಲೇ ಟಿಕೆಟ್ ಕೊಟ್ಟರೂ ಹೋರಾಡುತ್ತೇನೆ, ಗೆಲ್ತೇನೆ. ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ನೀಡುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ವಿಜಯಪುರ ನಗರದಲ್ಲಿ ಇಂದು ಬುಧವಾರ ಮಾತನಾಡಿದ ಅವರು, ನಾನು ಹೆತ್ತ ತಾಯಿಗೆ ದ್ರೋಹ ಮಾಡಿಲ್ಲ. ಒಮ್ಮೆ ಟಿಕೆಟ್ ಕೊಟ್ಟರೆ ಮುಗೀತು, ಅವರ ಪರವಾಗಿಯೇ ಕೆಲಸ ಮಾಡ್ತೇವೆ ಎಂಬುದ ಅರ್ಥ ಮಾಡಿಕೊಳ್ಳಬೇಕು. ಹಾಗಂತ ಯಾರೇ ಅಭ್ಯರ್ಥಿಯಾಗಲಿ ತಮ್ಮ ಸೋಲನ್ನು ಮತ್ತೊಬ್ಬರ ಮೇಲೆ ಹೇಳೋದು ದ್ರೋಹ ಬಗೆದಂತೆ. ಯಾರಿಗೆ ಟಿಕೆಟ್ ನೀಡಬೇಕೆಂದು ನಮ್ಮ ಹಿರಿಯರು ತೀರ್ಮಾನಿಸ್ತಾರೆ ಎಂದು ವಿಜಯಪುರ ನಗರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇರ ನುಡಿಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇನ್ನು ತಮ್ಮ ವಿರುದ್ಧದ ಅಭಿಯಾನ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಯಾರಿಗೇ ಟಿಕೆಟ್ ಕೊಟ್ಟರೂ ಗೆಲ್ಲುವ ಕ್ಷೇತ್ರ ನನ್ನದಾಗಿದೆ, ಹಾಗಾಗಿ ಸಹಜವಾಗಿಯೇ ಬೇಡಿಕೆ ಇದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಜನ 2 ಬಾರಿ ನನ್ನನ್ನು ಗೆಲ್ಲಿಸಿದ್ದಾರೆ. ಬೇರೆಯವರು ಟಿಕೆಟ್ ಕೇಳಿದ್ದು ತಪ್ಪಲ್ಲ, ಆದ್ರೆ ಹಾಲಿ ಸಂಸದೆಯಾಗಿ ನನಗೆ ಅವಮಾನ ಮಾಡುವ ರೀತಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ. ಹೊರಗಿನವರು ಬಂದು ಗೋಬ್ಯಾಕ್ ಅಭಿಯಾನ ಮಾಡುತ್ತಿದ್ದಾರೆ. ಇದು ಎಷ್ಟರಮಟ್ಟಿಗೆ ಸರಿ? ನಾನು ವಿಚಲಿತಳಾಗಿಲ್ಲ, ನಮ್ಮ ಕಾರ್ಯಕರ್ತರು ಸಹ ವಿಚಲಿತರಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಸದ್ಯದಲ್ಲೇ ಭಾರತದಲ್ಲಿ ಅತಿದೊಡ್ಡ ಪ್ರಜಾತಂತ್ರದ ಚುನಾವಣೆ ನಡೆಯಲಿದೆ. ಎಲ್ಲ ವರ್ಗದ ವಯೋಮಾನದವರಿಗೆ ಮತದಾನದ ಹಕ್ಕು ನೀಡಲಾಗಿದೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಮಂತ್ರಿ ಆಗುತ್ತಾರೆ. ಮೋದಿ 10 ವರ್ಷಗಳಲ್ಲಿ ದೇಶದ ಗೌರವ, ಭದ್ರತೆಗಾಗಿ ಕೆಲಸ ಮಾಡಿದ್ದಾರೆ. ಮೋದಿ ಪ್ರಧಾನಿಯಾದ ಮೇಲೆ ದೇಶದ ಮತ್ತು ಸೈನ್ಯದ ದಿಕ್ಕು ಬದಲಾಗಿದೆ. ಈ ಹಿಂದೆ ಭಾರತದ ಪ್ರಧಾನಿ ಹೋದರೆ ಎದ್ದುನಿಂತು ಗೌರವ ಕೊಡ್ತಿರಲಿಲ್ಲ. ಆದರೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವ ಹೆಚ್ಚಿದೆ. ಯಾವುದೇ ದೇಶಕ್ಕೆ ಹೋದರೂ ಭಾರತಕ್ಕೆ ಗೌರವ ಸಿಗುತ್ತಿದೆ ಎಂದು ಶೋಭಾ ಹೆಮ್ಮೆಯಿಂದ ಹೇಳಿದರು.
ಲೋಕಸಭಾ ಚುನಾವಣೆ ಸಮ್ಮುಖದಲ್ಲಿ ಬಿಜೆಪಿಯಲ್ಲಿ ಟಿಕೆಟ್ ಗಾಗಿ ಈ ಬಾರಿ ಹಾವೇರಿ ಕ್ಷೇತ್ರದಲ್ಲಿ ಈಶ್ವರಪ್ಪ ಪುತ್ರ ಕಾಂತೇಶ್ ಗೆ ಟಿಕೆ ನೀಡುವ ಮತ್ತು ಮೈಸೂರು ಕ್ಷೇತ್ರದ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪೋ ವಿಚಾರವಾಗಿ ಮಾತನಾಡಿದ ಶೋಭಾ ನಾನೀಗ ಯಾವುದರ ಬಗ್ಗೆಯೂ ಮಾತನಾಡಲ್ಲ. ಎಲ್ಲವನ್ನು ಕೇಂದ್ರ ತೀರ್ಮಾನ ಮಾಡುತ್ತದೆ. ಯಾರಿಗೆ ಟಿಕೆಟ್ ಕೊಡಬೇಕು ಯಾರು ಎಲ್ಲಿ ಬಂದರೆ ಅನುಕೂಲ. ಜಾತಿ ಸಮೀಕರಣ, ಸೋಶಿಯಲ್ ಇಂಜಿನಿಯರಿಂಗ್ ಮಾಡಿ ಭಾಗಗಳನ್ನ ವಿಂಗಡಿಸಿ ಟಿಕೆಟ್ ನೀಡಲಾಗುತ್ತದೆ. ಕೆಲವರು ಕೆಲಸ ಮಾಡಿರುತ್ತಾರೆ, ಆದರೂ ಅವರಿಗೆ ಟಿಕೆಟ್ ತಪ್ಪುತ್ತೆ. ಇದೆಲ್ಲ ನಮ್ಮ ಹಿರಿಯರು ತೀರ್ಮಾನ ಮಾಡುತ್ತಾರೆ. ನಮಗೆ ಪ್ರಧಾನಿ ಮೋದಿ ಹಾಗೂ ಕಮಲದ ಚಿಹ್ನೆಯಷ್ಟೇ ಕ್ಯಾಂಡಿಡೇಟ್! ನಮಗೆ ಟಿಕೆಟ್ ಸಿಗಲಿ ಬಿಡಲಿ ಮೋದಿಗಾಗಿ ಕೆಲಸ ಮಾಡುವವರು ನಾವು. ಮೋದಿಯವರ ಮೂಲಕ ದೇಶಕ್ಕಾಗಿ ಕೆಲಸ ಮಾಡುವವರು. ಟಿಕೆಟ್ ವಿಚಾರದಲ್ಲಿ ಅಸಮಾಧಾನದಲ್ಲಿರುವ ಅಭ್ಯರ್ಥಿಗಳನ್ನು ಸಮಾಧಾನ ಮಾಡುತ್ತೇವೆ. ನಮ್ಮ ಹಿರಿಯರಿಗೆ ಆ ಶಕ್ತಿ ಇದೆ. ದೇಶದ ಚುನಾವಣೆ ಗಾಗಿ ನಾವೆಲ್ಲ ಸೇರಿ ಒಟ್ಟಾಗಿ ಕೆಲಸ ಮಾಡೋ ವಿಶ್ವಾಸದಲ್ಲಿ ಹೋಗುತ್ತೇವೆಂದು ವಿಜಯಪುರ ನಗರದ ಪ್ರವಾಸಿ ಮಂದಿರದಲ್ಲಿ ಹೇಳಿದರು.