ಮಂಡ್ಯ:ನಾನು ಮಂಡ್ಯದ ಗೌಡತಿ ಎನ್ನುವುದನ್ನು ನಿರಾಕರಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಮತ್ತು ಬದಲಾವಣೆ ಮಾಡಲೂ ಆಗುವುದಿಲ್ಲ. ನನ್ನ ತಾಯಿ ಊರು ಮತ್ತು ನನ್ನ ತಂದೆ ಮೃತಪಟ್ಟ ಊರು ಮಂಡ್ಯವಾಗಿದೆ ಎಂದು ಮಾಜಿ ಸಂಸದೆ ರಮ್ಯಾ ಹೇಳಿದ್ದಾರೆ.
ಸಂಸತ್ ಸದಸ್ಯೆಯಾಗಿ ತಾನು ಪ್ರತಿನಿಧಿಸಿದ್ದ ಮಂಡ್ಯದಿಂದಲೇ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿಗಳ ಪರ ತಾರಾಪ್ರಚಾರ ಆರಂಭಿಸಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಗೋಪಾಲಪುರದಲ್ಲಿ ನಮ್ಮ ತಾತನ ತೊಟ್ಟಿ ಮನೆ ಇದೆ.ನೂನೂ ಕೂಡ ಮಂಡ್ಯದಲ್ಲಿ ತೊಟ್ಟಿಮನೆ ನಿರ್ಮಿಸುವ ಆಸೆ ಇದೆ ಎಂದರು.
ನನ್ನ ಮತ್ತು ಮಂಡ್ಯದ ನಡುವೆ ಕೇವಲ ರಾಜಕೀಯ ಸಂಬಂಧ ಮಾತ್ರವಲ್ಲ, ಕೌಟುಂಬಿಕ ಸಂಬಂಧ ಇದೆ. ಮಂಡ್ಯದ ಜನತೆ ನನ್ನ ಕಷ್ಟದ ಕಾಲದಲ್ಲಿ ಕೈಹಿಡಿದಿದ್ದಾರೆ. ಅವರನ್ನು ಎಂದೂ ಮರೆಯಲು ಸಾಧ್ಯವಿಲ್ಲ. ನನಗೆ ಅವರ ಮೇಲೆ ಇರುವ ಗೌರವ, ಪ್ರೀತಿ ಯಾವತ್ತೂ ಕಡಿಮೆ ಆಗುವುದಿಲ್ಲ ಎಂದು ಅವರು ತಿಳಿಸಿದರು.
ನಾನು ಸೋತಿದ್ದಕ್ಕೆ ಬೇಸರ ಮಾಡಿಕೊಂಡಿಲ್ಲ. ಸೋತ ಮೇಲೂ ಅನೇಕ ಬಾರಿ ಮಂಡ್ಯಕ್ಕೆ ಬಂದಿದ್ದೇನೆ. ಪಾಂಡವಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಭೇಟಿ ನೀಡಿದ್ದೇನೆ. ಕೆ.ಎಸ್.ಪುಟ್ಟಣ್ಣಯ್ಯ ಅವರು ಮೃತಪಟ್ಟಾಗ ಬಂದಿದ್ದೇನೆ. ಪಕ್ಷವು ರಾಷ್ಟ್ರಮಟ್ಟದ ಜವಾಬ್ದಾರಿ ಕೊಟ್ಟಿದ್ದರಿಂದ ನಂತರ ಆರೋಗ್ಯ ಹದಗೆಟ್ಟಿದ್ದರಿಂದ ಬರಲು ಸಾಧ್ಯವಾಗಲಿಲ್ಲ ಅವರು ಸ್ಪಷ್ಟಪಡಿಸಿದರು.
ರಾಜಕೀಯದಲ್ಲಿ ಆಸಕ್ತಿ ಇದೆಯೇ? ಇಲ್ಲವೇ? ಎನ್ನುವ ಪ್ರಶ್ನೆಗಿಂತ ಮುಖ್ಯವಾಗಿ ಪಕ್ಷ ಏನು ನಿರ್ಧಾರ ತೆಗೆದುಕೊಳ್ಳುತ್ತದೋ ಅದಕ್ಕೆ ಬದ್ದರಾಗಿರೋದು ಮುಖ್ಯ. ಸ್ಪರ್ಧೆ ಮಾಡಲು ಹಲವಾರು ಆಕಾಂಕ್ಷಿಗಳಿರುತ್ತಾರೆ. ಅವರೆಲ್ಲರಿಗೂ ಟಿಕೆಟ್ ಕೊಡಲು ಸಾಧ್ಯವಿಲ್ಲ. ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದಕ್ಕೆ ಬದ್ದನಾಗಿರಬೇಕು ಎಂದು ಅವರು ತಾವು ಮತ್ತೆ ಸ್ಪರ್ಧೆ ಮಾಡುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದರು.
ಮಂಡ್ಯ ಜನತೆ ತುಂಬಾ ಬುದ್ದಿವಂತರು. ಯಾರು ಒಳ್ಳೆಯವರು, ಕೆಟ್ಟವರು ಅಂತ ಚೆನ್ನಾಗಿ ಗೊತ್ತಿದೆ. ರವಿಕುಮಾರ್ ಗಣಿಗ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ಅಭ್ಯರ್ಥಿಗಳು ಪ್ರಬಲವಾಗಿದ್ದು ಗೆಲ್ಲುತ್ತಾರೆ. ಸ್ಟಾರ್ ಪ್ರಚಾರಕರ ಪಟ್ಟಿ ಪ್ರಕಾರ ಇಂದಿನಿಂದ ಪ್ರಚಾರ ಆರಂಭಿಸಿದ್ದೇನೆ. ಮೈಸೂರು, ಹುಬ್ಬಳ್ಳಿ, ಧಾರಾವಾಢ, ವಿಜಾಪುರ, ಮುಂತಾದ ಕಡೆ ಪ್ರಚಾರಕ್ಕೆ ಹೋಗುತ್ತಿದ್ದೇನೆ ಎಂದು ಅವರು ಹೇಳಿದರು.