ಬೆಂಗಳೂರು : ಎಐಸಿಸಿ ಪ್ರಧಾನ ಕಾರ್ಯದರ್ಶಿ ಒಬ್ಬನೇ ದೆಹಲಿಗೆ ಬರುವಂತೆ ತಿಳಿಸಿರುವುದರಿಂದ ನಾನು ಒಬ್ಬನೇ ಹೋಗುತ್ತಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಇಂದು (ಮಂಗಳವಾರ) ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಶಿವಕುಮಾರ್ ಭಾಗವಹಿಸಲಿದ್ದಾರೆ.
ದೆಹಲಿಗೆ ಪ್ರಯಾಣಿಸಲು ಸದಾಶಿವನಗರದಲ್ಲಿರುವ ತಮ್ಮ ನಿವಾಸದಿಂದ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ನನ್ನ ಪಾಲಿನ ದೇವರು. ಕಾಂಗ್ರೆಸ್ ಪಕ್ಷ ನನ್ನ ಪಾಲಿನ ದೇವಾಲಯ. ಕಾಂಗ್ರೆಸ್ ಪಕ್ಷ ನನಗೆ ತಾಯಿ ಇದ್ದಂತೆ ಎಂದು ಭಾವನಾತ್ಮಕವಾಗಿ ಹೇಳಿದರು.
ತಾಯಿಗೆ, ಮಕ್ಕಳಿಗೆ ಏನು ನೀಡಬೇಕು ಎಂಬುದು ದೇವರಿಗೆ ಗೊತ್ತಿರುತ್ತದೆ. ನಾನು ನನ್ನ ದೇವರನ್ನು ಭೇಟಿ ಮಾಡಲು ದೇವಾಲಯಕ್ಕೆ ಹೋಗುತ್ತಿದ್ದೇನೆ ಎಂದೂ ಹೇಳಿದರು.
ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಈ ಗೊಂದಲ ವರಿಷ್ಠರ ಸಮ್ಮುಖದಲ್ಲಿ ಮಂಗಳವಾರ ನಡೆಯಲಿರುವ ಸಭೆಯಲ್ಲಿ ಅಂತ್ಯ ಕಾಣುವ ಸಾಧ್ಯತೆ ಇದೆ.
ವರಿಷ್ಠರ ಆಹ್ವಾನದ ಮೇರೆಗೆ ಸಿದ್ದರಾಮಯ್ಯ ಅವರು ಸೋಮವಾರವೇ ತಮ್ಮ ಆಪ್ತ ಶಾಸಕರ ಜೊತೆ ದೆಹಲಿಗೆ ತೆರಳಿದ್ದಾರೆ. ಆದರೆ, ಆನಾರೋಗ್ಯದ ಕಾರಣಕ್ಕೆ ಶಿವಕುಮಾರ್ ತಮ್ಮ ದೆಹಲಿ ಪ್ರಯಾಣವನ್ನು ಸೋಮವಾರ ಸಂಜೆ ರದ್ದುಪಡಿಸಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಮಂಗಳವಾರ ದೆಹಲಿಯಲ್ಲಿ ವರಿಷ್ಠರ ಸಭೆ ನಡೆಯಲಿದೆ.