ಬೆಂಗಳೂರು: ಮುಂಬರಲಿರುವ ಲೋಕಸಭೆ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ನಾನು ಅಕಾಂಕ್ಷಿ ಅಲ್ಲ ಎಂದು ಜೆಡಿಎಸ್‍ನ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು,ಇದು ನನ್ನ ವೈಯಕ್ತಿಕ ಅಭಿಪ್ರಾಯ. ಈಗಾಗಲೇ ಹಲವು ಬಾರಿ ಹೇಳಿದ್ದೇನೆ.ಒಂದು ದಿನ ಒಂದು ರೀತಿ ಮಾತನಾಡಿ, ಮತ್ತೊಂದು ದಿನ ಬೇರೆ ಮಾತನಾಡುವ ವ್ಯಕ್ತಿತ್ವ ನನ್ನದಲ್ಲ. ನಾಳೆ ಮಂಡ್ಯ ಜಿಲ್ಲೆಯ ಸಭೆಯನ್ನು ಮಾಡ್ತಿದ್ದೇವೆ.ಯಾರು ಸ್ಪರ್ಧೆ ಮಾಡಬೇಕೆಂದು ಅಲ್ಲಿ ಚರ್ಚೆಯಾಗುತ್ತದೆ ಎಂದು ವಿವರಣೆ ನೀಡಿದರು.
ಮಂಡ್ಯ ಕ್ಷೇತ್ರದಲ್ಲಿ ಯಾರು ನಿಲ್ಲಬೇಕೆಂಬುದು ಚರ್ಚೆ ಆರಂಭವಾಗಿದೆ. ಇದರ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ಮುಖಂಡರು ಸಂಭಾವ್ಯ ಆಕಾಂಕ್ಷಿಗಳನ್ನು ಸಭೆಯಲ್ಲಿ ನಾಯಕರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.
ಎನ್‍ಡಿಎ ಜೊತೆಗಿನ ಜೆಡಿಎಸ್ ಸಂಬಂಧ ಒಳ್ಳೆಯ ಉದ್ಧೇಶದಿಂದ ಮಾಜಿ ಪ್ರಧಾನಿ ದೇವೇಗೌಡರು ನಿರ್ಧಾರ ತೆಗದುಕೊಂಡಿದ್ದಾರೆ. ಪ್ರಧಾನಿ ಮೋದಿಯವರು ದೇವೇಗೌಡರಿಗೆ ಕೊಡುವ ಗೌರವವನ್ನು ನಾವೆಲ್ಲಾ ಕಂಡಿದ್ದೇವೆ. ನಮ್ಮನ್ನು ಅತ್ಯಂತ ಗೌರವದಿಂದ ನಡೆಸಿಕೊಂಡಿದ್ದಾರೆ. ಹೀಗಾಗಿ 28 ಕ್ಷೇತ್ರಗಳಲ್ಲೂ ಬಿಜೆಪಿ, ಜೆಡಿಎಸ್ ಅಣ್ಣತಮ್ಮಂದಿರಂತೆ ದುಡಿದು ಗೆಲ್ಲಬೇಕು ಎಂದು ಅವರು ತಿಳಿಸಿದರು.