ಮನೆ ರಾಜ್ಯ ಬಿಜೆಪಿಗೆ ಬರುವಂತೆ ನನಗೆ ಬಹಳಷ್ಟು ಒತ್ತಡ ಇದೆ: ಲಕ್ಷ್ಮಣ್ ಸವದಿ

ಬಿಜೆಪಿಗೆ ಬರುವಂತೆ ನನಗೆ ಬಹಳಷ್ಟು ಒತ್ತಡ ಇದೆ: ಲಕ್ಷ್ಮಣ್ ಸವದಿ

0

ಬೆಳಗಾವಿ: ಬಿಜೆಪಿಗೆ ಬರುವಂತೆ ನನಗೆ ಬಹಳಷ್ಟು ಒತ್ತಡ ಇದೆ. ತಿರುಗಿ ಮಗ ಮನೆಗೆ ಬರಬೇಕು ಎಂಬುದಾಗಿ ಬಿಜೆಪಿಯವರು ಬೇಡಿಕೆ ಇಟ್ಟಿದ್ದಾರೆ. ಕಹಿ ಘಟನೆಗಳನ್ನ ಮರೆಯಬೇಕು ಎಂದೂ ಹೇಳುತ್ತಿದ್ದಾರೆ ಎಂದು ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.

ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಏನೇ ಒತ್ತಡ ಬಂದರೂ ನನ್ನ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಿದ್ದೇನೆ. ಕಾಂಗ್ರೆಸ್ ಚಿಹ್ನೆ ಮೇಲೆ ಜನ ನನ್ನ ಆಯ್ಕೆ ಮಾಡಿದ್ದಾರೆ. ಬಹಳ ದೊಡ್ಡ ಅಂತರದಲ್ಲಿ ಗೆದ್ದಿದ್ದೇನೆ. ನಾನು ಬಿಜೆಪಿಗೆ ಹೋಗುವ ಆಲೋಚನೆ ನನ್ನಲ್ಲಿ ಇಲ್ಲ. ಯಾರು ಒತ್ತಡ ಹಾಕುತ್ತಿದ್ದಾರೆ, ಸಂಪರ್ಕ ಮಾಡಿದ್ದಾರೆ ಎಂಬುದನ್ನು ಬಹಿರಂಗ ಪಡಿಸುವುದಿಲ್ಲ. ಅದನ್ನು ಸಾರ್ವಜನಿಕವಾಗಿ ಹೇಳಲು ಆಗುವುದಿಲ್ಲ. ನನ್ನ ನಿಲುವು ನಾನು ಕಾಂಗ್ರೆಸ್ ಪಕ್ಷದಲ್ಲಿ ಮುಂದುವರಿಯುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಶೆಟ್ಟರ್ ಬೆನ್ನಲ್ಲೇ ಲಕ್ಷ್ಮಣ ಸವದಿ ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳ ಬಗ್ಗೆ ಅಥಣಿಯಲ್ಲಿ ಪ್ರತಿಕ್ರಿಯಿಸಿದ ಸವದಿ, ಈ ಸಂದರ್ಭದಲ್ಲಿ ಚರ್ಚೆ ನಡೆಯುವುದು ಸಹಜ. ಶೆಟ್ಟರ್ ಅವರ ಜತೆ ನನ್ನನ್ನು ಯಾಕೆ ತಳಕು ಹಾಕ್ತಿದೀರಿ ಗೊತ್ತಾಗುತ್ತಿಲ್ಲ. ನಾನು ಹಾಗೂ ಅವರು ಕಾಂಗ್ರೆಸ್ ಪಕ್ಷಕ್ಕೆ ಒಟ್ಟಿಗೆ ಬಂದವರು ಅಲ್ಲ. ನಾನು ಮೊದಲು ಕಾಂಗ್ರೆಸ್ ಪಕ್ಷಕ್ಕೆ ಬಂದೆ, ಬಳಿಕ ಅವರು ಬಂದರು. ಶೆಟ್ಟರ್ ಅವರು ಕಾಂಗ್ರೆಸ್ ಬಿಟ್ಟು ಈಗಾಗಲೇ ಬಿಜೆಪಿ ಸೇರ್ಪಡೆ ಆಗಿದ್ದಾರೆ. ಯಾಕೆ ಹೋದರು, ಯಾವ ಕಾರಣಕ್ಕೆ ಹೋದರು ಎಂಬುದನ್ನು ಅವರೇ ಹೇಳಬೇಕು.

ಸವದಿಗೆ ಸಚಿವ ಸ್ಥಾನ ನೀಡುತ್ತಿದ್ದಾರೆ ಎಂಬ ವಿಚಾರವಾಗಿ ಹಬ್ಬಿರುವ ಸುದ್ದಿಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಸಂದರ್ಭದಲ್ಲಿ ಅದರ ಬಗ್ಗೆ ಚರ್ಚೆ ಮಾಡುವುದು ಸೂಕ್ತ ಅಲ್ಲ ಎಂದರು.

ಬೆಳಗಾವಿ ರಾಜಕಾರಣದಲ್ಲಿ ನನ್ನನ್ನು ಕಡೆಗಣಿಸಿಲ್ಲ. ಸಿಎಂ, ಡಿಸಿಎಂ ನನ್ನನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ. ಅದರಿಂದ ಯಾವುದೇ ಬೇಜಾರು, ಅಸಮಾಧಾನ ಇಲ್ಲ. ನಾನು ಹೋಗುವ ಪ್ರಯತ್ನ ಮಾಡಿದರೆ ಅವರು ನನ್ನ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ನಾನು ಹೋಗುತ್ತಿಲ್ಲ ಎಂದಾದರೆ ಸಿಎಂ, ಡಿಸಿಎಂ ಉಳಿಸಿಕೊಳ್ಳಲು ಪ್ರಯತ್ನ ಮಾಡುವ ವಿಚಾರ ಏನು ಬಂತು ಎಂದು ಅವರು ಹೇಳಿದರು.

ಹಿಂದಿನ ಲೇಖನನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದ 75 ನೇ ಗಣರಾಜ್ಯೋತ್ಸವ ಆಚರಣೆ
ಮುಂದಿನ ಲೇಖನಬಾಗಲಕೋಟೆ: ಬನಶಂಕರಿ ಜಾತ್ರೆ ಮುಗಿಸಿಕೊಂಡು ಹಿಂತಿರುಗುತ್ತಿದ್ದ ನಾಲ್ವರು ಅಪಘಾತದಲ್ಲಿ ಸಾವು