ಮನೆ ರಾಜ್ಯ ಒಕ್ಕಲಿಗ ಸಮುದಾಯ ಸಂಖ್ಯೆಯನ್ನು ಕಡಿಮೆ ತೋರಿಸಿರುವ ಸಮೀಕ್ಷೆ ನಾನು ಒಪ್ಪಲ್ಲ: ಸಚಿವ ಹೆಚ್.ಡಿ ಕುಮಾರಸ್ವಾಮಿ

ಒಕ್ಕಲಿಗ ಸಮುದಾಯ ಸಂಖ್ಯೆಯನ್ನು ಕಡಿಮೆ ತೋರಿಸಿರುವ ಸಮೀಕ್ಷೆ ನಾನು ಒಪ್ಪಲ್ಲ: ಸಚಿವ ಹೆಚ್.ಡಿ ಕುಮಾರಸ್ವಾಮಿ

0

ಬೆಂಗಳೂರು: ಒಕ್ಕಲಿಗ ಸಮುದಾಯದ ಜನಸಂಖ್ಯೆಯನ್ನು ಕಡಿಮೆ ತೋರಿಸಿರುವ ಸರ್ಕಾರದ ಸಾಮಾಜಿಕ, ಆರ್ಥಿಕ ಸಮೀಕ್ಷೆ ವರದಿ ನಾನು ಒಪ್ಪುವುದಿಲ್ಲ. ಇದರ ವಿರುದ್ಧ ಹೋರಾಟ ಮಾಡ್ತೀನಿ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಎಕ್ಸ್‌ನಲ್ಲಿ ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಿರುವ ಹೆಚ್‌ಡಿಕೆ , ಜಾತಿಗಣತಿಯೋ, ದ್ವೇಷಗಣತಿಯೋ? ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂ.ಗ್ರಾಮಾಂತರ, ತುಮಕೂರು, ಚಿತ್ರದುರ್ಗ ಸೇರಿ ಹಳೇ ಮೈಸೂರು ಜಿಲ್ಲೆಗಳಲ್ಲಿ ವಾಸಿಸುವ ಒಕ್ಕಲಿಗ ಸಮುದಾಯದ ಸಂಖ್ಯೆ ಎಷ್ಟು? ಜಾತಿಗಣತಿ ಗಜಪ್ರಸವ ತಥಂಗಕ್ಕೆ ಸಂಪುಟದಲ್ಲಿ ಶಾಸ್ತ್ರೋಕ್ತವಾಗಿ ಅರಿಶಿಣ, ಕಂಕುಮ ಹಚ್ಚಿ ಕಡ್ಡಿ ಹಚ್ಚಲಾಗಿದೆ. ಆ ವರದಿಯದ್ದು ಎನ್ನಲಾದ ಅಂಕಿ-ಅಂಶಗಳು ಎಲ್ಲೆಡೆ ತೇಲಾಡುತ್ತಿವೆ. ಯಾವುದೋ ಅಜ್ಞಾತ ಕೈ ಅದನ್ನು ವ್ಯವಸ್ಥಿತವಾಗಿ ತೇಲಿಬಿಟ್ಟಿದೆ. ಒಕ್ಕಲಿಗ ಸಮಾಜಕ್ಕೆ ಸೇರಿದ ಅಂಕಿ-ಸಂಖ್ಯೆ ಅಷ್ಟೇ ಅಲ್ಲ, ವೀರಶೈವ ಲಿಂಗಾಯತ ಮತ್ತು ಇನ್ನಿತರೆ ಸಮಾಜಗಳ ಸಂಖ್ಯೆಯೂ ನನಗೆ ಅಚ್ಚರಿ ಹುಟ್ಟಿಸಿದೆ ಎಂದಿದ್ದಾರೆ.


ಗಣತಿ ಗ್ಯಾರಂಟಿ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲವೆಬ್ಬಿಸಲು ಹೂಡಿದ ಷಡ್ಯಂತ್ರ‍್ಯವೇ? ಅಥವಾ ಸರಣಿ ದರ ಏರಿಕೆ, ಸಾಲು ಸಾಲು ಭ್ರಷ್ಟ ಹಗರಣಗಳ ಮುಜುಗರದಿಂದ ಮುಖ ಮುಚ್ಚಿಕೊಳ್ಳಲು ಜನರ ಗಮನ ಬೇರೆಡೆಗೆ ಹೊರಳಿಸಲು ರೂಪಿಸಿದ ಸಂಚೇ? ಇಡೀ ರಾಜ್ಯವು ಜಾತಿ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದ್ದರೆ, ಕಾಂಗ್ರೆಸ್ ಸರ್ಕಾರದ ಈ ನಡೆ ಕೆಲ ನಿರ್ದಿಷ್ಟ ಸಮುದಾಯಗಳ ಮೇಲೆ ರಾಜಕೀಯ, ಸಾಮಾಜಿಕವಾಗಿ ಹಗೆತನ ಸಾಧಿಸುವ ಮುಂದುವರಿದ ಅಧ್ಯಾಯವೇ?

ಮುಖ್ಯಮಂತ್ರಿ ಕುರ್ಚಿ ಹತ್ತಲು ಚಾತಕ ಪಕ್ಷಿಯಂತೆ ನಿದ್ದೆಗೆಟ್ಟು, ಒಂದ್ ಸಲ ನಂಗೂ ಪೆನ್ನು-ಪೇಪರ್ ಕೊಡಿ ಎಂದು ಸಮುದಾಯದ ಮುಂದೆ ಮಂಡಿಯೂರಿ ಗೋಗರೆದ ವ್ಯಕ್ತಿ ಸಿದ್ದಷಡ್ಯಂತ್ರ‍್ಯ ವರದಿಗೆ ಶಿರಬಾಗಿ ಸಮ್ಮತಿಸುವರೇ? ಹಿಂದೊಮ್ಮೆ ನಾಡಪ್ರಭು ಶ್ರೀ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಷೀಣದನಿಯಲ್ಲಿ ಗಣತಿ ವರದಿಯನ್ನು ವಿರೋಧಿಸಿದ್ದವರು ಈಗ ನಾಲಿಗೆ ಬದಲಿಸಿದ್ದಾರೆ ಶಿವ ಶಿವಾ.

ನಾನ್ ಒಂದು ನ್ಯಾಷನಲ್ ಪಾರ್ಟಿ ಸ್ಟೇಟ್ ಪ್ರೆಸಿಡೆಂಟ್ ಕಣ್ರೀ. ನಂಗೆ ಎಲ್ರೂ ಸಮಾನ ಈಗಷ್ಟೇ ಕಣ್ ತೆರೆದಿದ್ದೇವೆ. ಗಣತಿಗೆ ಯಾರ ವಿರೋಧವೂ ಇಲ್ಲ, ವಿರೋಧವಾದ್ರೂ ಯಾಕಿರುತ್ತೆ ಹೇಳಿ? ಎಂದ್ಹೇಳಿ ಪ್ರಶ್ನಿಸಿದ ಸುದ್ದಿಗಾರರನ್ನೇ ತಳ್ಳಿಕೊಂಡು ಪಲಾಯನಗೈದರಲ್ಲಾ? ಪೆನ್ನು ಪೇಪರ್ ಕೊಟ್ಟ ಪಾಪಕ್ಕೆ ಒಕ್ಕಲಿಗ ಸಮಾಜ ಬೆಲೆ ತೆರುತ್ತಿದೆ. ಕುರ್ಚಿ ದುರಾಸೆಗೆ ಈ ವ್ಯಕ್ತಿ ಅದೇ ಪೆನ್ನಿನಲ್ಲಿ ಸಮಾಜದ ಮರಣಶಾಸನ ಬರೆಯುತ್ತಿದ್ದಾರೆ. ಈ ವರದಿಗೆ ನನ್ನ ಒಪ್ಪಿಗೆ ಇಲ್ಲ. ಅನ್ಯಾಯದ ವಿರುದ್ಧದ ಹೋರಾಟಕ್ಕೆ ನಾನು ಶತಸಿದ್ಧ. ಸಿದ್ದಷಡ್ಯಂತ್ರ‍್ಯ ದ್ವೇಷಗಣತಿ ಎಂದು ಆಕ್ರೋಶ ಹೊರಹಾಕಿದರು