ನವದೆಹಲಿ: ನನ್ನನ್ನು ಅನರ್ಹಗೊಳಿಸಿರುವುದರಿಂದ ಅಥವಾ ಜೈಲಿಗೆ ಅಟ್ಟುವುದರಿಂದ ನಾನು ಹೆದರುವುದಿಲ್ಲ ಅಥವಾ ಹಿಂದಕ್ಕೆ ಸರಿಯುವುದಿಲ್ಲ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.
ಲೋಕಸಭೆ ಸದಸ್ಯತ್ವ ಅನರ್ಹಗೊಂಡ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,ಅದಾನಿ ಪ್ರಕರಣದಲ್ಲಿ ನನ್ನ ಮುಂದಿನ ಭಾಷಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಯ ಕಾಡಿದ್ದರಿಂದ ನನ್ನ ಲೋಕಸಭೆ ಸದಸ್ಯತ್ವ ಅನರ್ಹಗೊಳಿಸಲಾಗಿದೆ ಎಂದರು.
ಅದಾನಿ ಪ್ರಕರಣದಲ್ಲಿ ದಿಗಿಲುಗೊಂಡಿರುವ ಸರ್ಕಾರ ಜನರ ದಿಕ್ಕು ತಪ್ಪಿಸಲು ಈ ಆಟವನ್ನು ಆಡಿದೆ ಎಂದು ಆರೋಪಿಸಿದ್ದಾರೆ.
ಷೇರು ಅಕ್ರಮದಲ್ಲಿ ಸಿಲುಕಿರುವ ಉದ್ಯಮಿ ಗೌತಮ್ ಅದಾನಿ ಮತ್ತು ಪ್ರಧಾನಿ ಮೋದಿ ನಂಟಿನ ಬಗ್ಗೆ ಪ್ರಶ್ನೆ ಮಾಡುತ್ತಲೇ ಇರುತ್ತೇನೆ. ನನ್ನನ್ನು ಶಾಶ್ವತವಾಗಿ ಅನರ್ಹಗೊಳಿಸಿದರೂ ಹೋರಾಟ ಮುಂದುವರಿಯಲಿದೆ ಎಂದು ಅವರು ಹೇಳಿದರು.
ಮಾರ್ಚ್ 23ರಂದು ಗುಜರಾತ್ ನ ನ್ಯಾಯಾಲಯವು 2019ರಲ್ಲಿ ದಾಖಲಾದ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಬಳಿಕ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ಲೋಕಸಭೆ ಕಾರ್ಯಾಲಯ ಶುಕ್ರವಾರ ಅಧಿಸೂಚನೆ ಹೊರಡಿಸಿತ್ತು.