ಹಾಸನ : ನಾನು ಮಾತು ಕೊಡಲ್ಲ, ಕೊಟ್ಟ ಮೇಲೆ ಮಾಡೇ ಮಾಡ್ತೀವಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಹಾಸನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಇಂದು ಅತ್ಯಂತ ಸಂತೋಷದಿಂದ ಉದ್ಘಾಟನೆ, ಶಂಕುಸ್ಥಾಪನೆ ಮಾಡಿದ್ದೇನೆ ಎಂದರು.
ಹಾಸನ ನಮಗೆ ಪಕ್ಕದ ಜಿಲ್ಲೆ. ಇಲ್ಲಿಯ ರಾಜಕೀಯ, ಸಮಸ್ಯೆ ಕೂಡ ಗೊತ್ತಿದೆ. ಅನೇಕ ಸಮಸ್ಯೆಗಳಿಗೆ ಪರಿಹಾರ ಕೊಡುವ ಕೆಲಸ ಮಾಡಿದ್ದೇವೆ. 2023ರ ಚುನಾವಣೆ ವೇಳೆ 492 ಭರವಸೆಗಳನ್ನು ಕೊಟ್ಟಿದ್ದೆವು. ನಾವು ಅಧಿಕಾರಕ್ಕೆ ಬಂದು ಎರಡು ವರ್ಷ, ಆರು ತಿಂಗಳು ತುಂಬಿದೆ. ಈ ಅವಧಿಯಲ್ಲಿ 242 ಭರವಸೆಗಳನ್ನು ಈಡೇರಿಸಿದ್ದೇವೆ. ನಮ್ಮ ಸರ್ಕಾರ 2013-2018 ಮತ್ತೆ 2023 ರಿಂದ ಇಲ್ಲಿಯವರೆಗೂ ಭರವಸೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದು ತಿಳಿಸಿದರು.
2013 ರಲ್ಲಿ 165 ಭರವಸೆಗಳನ್ನು ಕೊಟ್ಟಿದ್ದು, 158 ಭರವಸೆಗಳನ್ನು ಈಡೇರಿಸಿದ್ದೇವೆ. ಬೇಕಾದರೆ ಪರಿಶೀಲನೆ ಮಾಡಬಹುದು. 2023 ರಲ್ಲಿ 400 ಭರವಸೆಗಳನ್ನು ಕೊಟ್ಟಿದ್ದು, 242 ಭರವಸೆಗಳನ್ನು ಜಾರಿ ಮಾಡಿದ್ದೇವೆ. 2023ರ ಮೇ 23ಕ್ಕೆ ನಾವು ಅಧಿಕಾರಕ್ಕೆ ಬಂದೆವು. ಜೂ.11 ಕ್ಕೆ ಶಕ್ತಿ ಯೋಜನೆ ಕೊಟ್ಟಿವು. ಇಲ್ಲಿಯವರೆಗೂ 600 ಕೋಟಿಗೂ ಹೆಚ್ಚು ಫ್ರೀಯಾಗಿ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದಾರೆ.
ಹಾಸನ ಜಿಲ್ಲೆ ಪ್ರವಾಸೋದ್ಯಮ ಜಿಲ್ಲೆ. ಹೇಮಾವತಿ ಜಲಾಶಯದ ಕೆಳಗಡೆ 700 ಎಕರೆ ಜಾಗ ಇದೆ. ಉದ್ಯಾನ ಮಾಡಿ ಎಂದಿದ್ದಾರೆ. ಹಿಂದೆ ಮಂತ್ರಿಯಾಗಿದ್ದಾಗ ಬಂದು ನೋಡಿಕೊಂಡು ಹೋಗಿದ್ದೆ. ನಮ್ಮ ಸರ್ಕಾರ ಅದನ್ನು ಪರಿಶೀಲನೆ ಮಾಡಿ ಕಾರ್ಯಕ್ರಮ ಜಾರಿ ಮಾಡುವ ಪ್ರಯತ್ನ ಮಾಡುತ್ತೇವೆ. ಬೇಲೂರು-ಹಳೆಬೀಡು ಹೊಯ್ಸಳರ ರಾಜಧಾನಿ. ಶ್ರವಣಬೆಳಗೊಳದಲ್ಲೂ ಉದ್ಯಾನ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ನಾನು ಮಾತು ಕೊಡಲ್ಲ, ಕೊಟ್ಟ ಮೇಲೆ ಮಾಡೇ ಮಾಡ್ತೀವಿ. ಯಾವುದಾದರೂ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರ. ಒಂದು ವರ್ಷದೊಳಗೆ ಎಲ್ಲಾ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ವಿ ಎಂದರು.
ಲೋಕಸಭಾ ಚುನಾವಣೆ ಆದ್ಮೇಲೆ ಗ್ಯಾರಂಟಿ ನಿಲ್ಲಿಸುತ್ತಾರೆ ಎಂದು ಹೇಳಿದ್ದರು. ಟೀಕೆಗಳು ಸಾಯ್ತಾವೆ, ಮಾಡಿರುವ ಕೆಲಸಗಳು ಉಳಿತಾವೆ ಅಂತ ಡಿ.ಕೆ. ಹೇಳ್ತಿರ್ತಾರೆ ಯಾವಾಗಲೂ. ಗ್ಯಾರಂಟಿ ಯೋಜನೆ ಮಾಡಿರುವುದು ಅಸಮಾನತೆ ತೊಡದು ಹಾಕಲು. ಶಕ್ತಿ ಯೋಜನೆ ವೇಸ್ಟ್ ಅಂತಾರೆ. ಇದಕ್ಕೆಲ್ಲಾ ಜನರು ನೀವೇ ಉತ್ತರ ಕೊಡಬೇಕು. ನಾವು ದಡ್ಡರಾ? ಒಂದು ಲಕ್ಷಕ್ಕೂ ಹೆಚ್ಚು ಕೋಟಿ ಖರ್ಚು ಮಾಡುವುದು ಸಮಾನತೆ ತರಲು ಎಂದು ತಿಳಿಸಿದರು.














