ಮೈಸೂರು: “ಸಿಕ್ಕಪಟ್ಟೆ ಲೀಡರ್ ಗಳಾಗಿದ್ದಾರೆ, ನಾನು ಯಾರಿಗೂ ಪ್ರತಿಸ್ಪರ್ಧಿ ಆಗಲು ಬಯಸುವುದಿಲ್ಲ” ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮಾರ್ಮಿಕವಾಗಿ ನುಡಿದರು.
ತಮ್ಮ ಕುರಿತು ಎದ್ದಿರುವ ಸುದ್ದಿಗಳಿಗೆ ಮಾಧ್ಯಮಗಳಿಗೆ ಸ್ಪಷ್ಟೀಕರಣ ಕೊಡಲು ನಿರಾಕರಿಸಿದ ಬಿ.ಎಲ್. ಸಂತೋಷ್ ಅವರು ಈ ರೀತಿ ಮಾರ್ಮಿಕವಾಗಿ ಒಂದು ಮಾತು ಹೇಳಿ ಸುಮ್ಮನಾದರು.
“ಮಾಧ್ಯಮದವರು ನನ್ನನ್ನು 100 ಬಾರಿ ಮಾತಾಡಿಸಲು ಯತ್ನಿಸಿದ್ದಾರೆ. ನಾನು ಮಾತಾಡಿಲ್ಲ. ನಮ್ಮಲ್ಲಿ ಮಾತಾಡಲು ಪ್ರತಾಪ್ ಸಿಂಹ ಥರದವರು ಇದ್ದಾರೆ. ಅವರೆ ಮಾತಾಡಲಿ. ನಾನು ಮಾತನಾಡಿ ಯಾರಿಗೆ ಯಾಕೆ ಪ್ರತಿ ಸ್ಪರ್ಧಿಯಾಗಲಿ ಎಂದು ಸಂತೋಷ್ ಪ್ರಶ್ನಿಸಿದರು.
ಕಾಂಗ್ರೆಸ್‌ನವರು ಯಾರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ಕೊಡುತ್ತಾರೆ ಎನ್ನುವುದನ್ನು ಸ್ಪಷ್ಟಪಡಿಸಲಿ’ ಎಂದು ಸವಾಲು ಹಾಕಿದರು.
ನಾವು ಮುಸ್ಲಿಮರಿಗಿದ್ದ ಶೇ 4ರಷ್ಟು ಮೀಸಲಾತಿಯನ್ನು ತೆಗೆದು ಒಕ್ಕಲಿಗರು ಮತ್ತು ಲಿಂಗಾಯತರಿಗೆ ತಲಾ ಶೇ 2ರಷ್ಟನ್ನು ಹಂಚಿಕೆ ಮಾಡಿದ್ದೇವೆ. ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೂ ಹೆಚ್ಚಿಸಿದ್ದೇವೆ. ಮೀಸಲಾತಿಯ ಚಕ್ರವನ್ನು ನಾವು ಮುಂದಕ್ಕೆ ತೆಗೆದುಕೊಂಡು ಹೋಗಿದ್ದೇವೆ. ಕಾಂಗ್ರೆಸ್‌ನವರು ಹಿಂದಕ್ಕೆ ತೆಗೆದುಕೊಂಡು ಹೋಗಲಾಗುವುದಿಲ್ಲ. ಏಕೆಂದರೆ, ಅವರು ಅದಿಕಾರಕ್ಕೆ ಬರುವುದೇ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್‌ನವರು ಅಭಿವೃದ್ಧಿಯ ಚಕ್ರಕ್ಕೂ ಕಲ್ಲು ಹಾಕುತ್ತಿದ್ದಾರೆ. ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ ಎಂದು ಟೀಕಿಸಿದರು.
ಶೇ 99ರಷ್ಟು ವಿಶ್ವಾಸಾರ್ಹ ಸಮೀಕ್ಷೆಗಳು ಬಿಜೆಪಿಯ ಪರವಾಗಿಯೇ ಬಂದಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿಯು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಿವೆ. ಆದರೆ, ಹೆಸರೇ ಗೊತ್ತಿಲ್ಲದ ಕಂಪನಿಗಳ ಸರ್ವೇಗಳನ್ನು ಕಾಂಗ್ರೆಸ್‌ನವರು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ನಮ್ಮ ಮುಖ್ಯಮಂತ್ರಿ ಅಭ್ಯರ್ಥಿಯು ಎಲ್ಲಿ ಕಣಕ್ಕಿಳಿಯಬೇಕೆಂದು ಕ್ಷೇತ್ರವನ್ನು ಹುಡುಕಲು ಹೋಗಲಿಲ್ಲ. ಒಳೇಟು ಕೊಡುವುದು ನಮ್ಮ ಪಕ್ಷದಲ್ಲಿಲ್ಲ. ಆದರೆ, ಮೈಸೂರಿನವರು ಎಲ್ಲೆಲ್ಲೋ ಹೋಗಿ ವರುಣಕ್ಕೇ ಬಂದರು. ಅವರ ಮಗ ಡಾ.ಯತೀಂದ್ರ ತ್ಯಾಗ ಮಾಡಿದ ಎಂದೂ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಮರ್ಯಾದೆಗೋಸ್ಕರ ವರುಣದಲ್ಲಿ ಸ್ಪರ್ಧಿಸಿದ್ದಾರೆಯೇ ಹೊರತು ಯಾರ ತ್ಯಾಗವೂ ಅಲ್ಲ ಎಂದು ವಾಗ್ದಾಳಿ ನಡೆಸಿದರು.
ಕೆ.ಎಸ್.ಈಶ್ವರಪ್ಪ, ಎಸ್.ಎ.ರಾಮದಾಸ್ ಮಾಡಿರುವುದು ತ್ಯಾಗ ಎಂದರು.















