ಬೆಂಗಳೂರು: ನಾನು ವರುಣಾ ಮತ್ತು ಕೋಲಾರ ಎರಡು ಕಡೆ ಟಿಕೆಟ್ ಕೊಡುವಂತೆ ಹೈಕಮಾಂಡ್’ಗೆ ಕೇಳಿದ್ದೇನೆ. ವರುಣಾದಲ್ಲಿ ನಿಲ್ಲುವಂತೆ ಹೈಕಮಾಂಡ್’ನವರು ಹೇಳಿದ್ದಾರೆ. ಕೋಲಾರದ ಕುರಿತು ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ಮೊದಲ ಪಟ್ಟಿ ಬಿಡುಗಡೆಯಾಗಿದೆ. ಒಂದೇ ಹೆಸರು, ಗೊಂದಲ ಇಲ್ಲದ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗಿದೆ. ಸ್ಕ್ರೀನಿಂಗ್ ಹಾಗೂ ಸಿಇಸಿ ಸಭೆಯಲ್ಲಿ ಚರ್ಚೆ ನಡೆದು ಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದರು.
ಆರು ಹಾಲಿ ಶಾಸಕರ ಕ್ಷೇತ್ರದಲ್ಲಿ ಹೆಚ್ಚು ಆಕಾಂಕ್ಷಿಗಳು ಇದ್ದಾರೆ. ಹೀಗಾಗಿ, ಆ ಕ್ಷೇತ್ರಗಳಿಗೆ ಘೋಷಣೆ ಆಗಿಲ್ಲ. ಎರಡನೇ ಪಟ್ಟಿಯಲ್ಲಿ ಆ ಕ್ಷೇತ್ರಗಳ ಟಿಕೆಟ್ ಘೋಷಣೆ ಆಗಲಿದೆ ಎಂದರು.
ಟಿಕೆಟ್ ನೀಡಲು ಸಮೀಕ್ಷೆ ಒಂದೇ ಮನದಂಡ ಅಲ್ಲ. ಕಾರ್ಯಕರ್ತರ ಅಭಿಪ್ರಾಯವೂ ಮುಖ್ಯವಾಗಿತ್ತು. ಪಕ್ಷದ ಕಾರ್ಯಾಧ್ಯಕ್ಷರು, ಉಸ್ತುವಾರಿ ಕಾರ್ಯದರ್ಶಿಗಳು ಕೂಡ ವರದಿ ಕೊಟ್ಟಿದ್ದರು. ಜಿಲ್ಲಾಧ್ಯಕ್ಷ, ಬ್ಲಾಕ್ ಅಧ್ಯಕ್ಷರ ಅಭಿಪ್ರಾಯವನ್ನೂ ಪಡೆದಿದ್ದೆವು. ಅದರ ಆಧಾರದ ಮೇಲೆ ಟಿಕೆಟ್ ಹಂಚಿಕೆ ಮಾಡಿದ್ದೇವೆ ಎಂದೂ ಹೇಳಿದರು.
ರಾಹುಲ್ ಗಾಂಧಿ ಅವರನ್ನು ತರಾತುರಿಯಲ್ಲಿ ಅನರ್ಹ ಮಾಡಲಾಗಿದೆ. ರಾಹುಲ್ ವರ್ಚಸ್ಸಿಗೆ ಧಕ್ಕೆ ತರಲು ಹೊರಟಿದ್ದಾರೆ. ದೇಶದಲ್ಲಿ ಇಂತಹ ಬೆಳವಣಿಗೆ ಆಗಿರಲಿಲ್ಲ. ಭಾರತ್ ಜೋಡೊ ಯಶಸ್ಸು ಬಿಜೆಪಿಗೆ ತಡೆಯಲಾಗಲಿಲ್ಲ. ಈ ಅನರ್ಹತೆಯಿಂದ ರಾಹುಲ್ ಮತ್ತಷ್ಟು ಜನಪ್ರಿಯ ಆಗುತ್ತಾರೆ. ಇದರಿಂದ ಲಾಭವಾಗಲಿದೆ ಎಂದು ಬಿಜೆಪಿಯವರು ಅಂದುಕೊಂಡರೆ ದಡ್ಡತನ ಎಂದು ಸಿದ್ದರಾಮಯ್ಯ ಹೇಳಿದರು.