ಬೆಳಗಾವಿ: “ಹಿಂದಿನಿಂದಲೂ ತ್ಯಾಗ ಮಾಡಿಕೊಂಡೇ ಬಂದಿದ್ದೇನೆ, ನನಗೆ ಪಕ್ಷ ಮುಖ್ಯ” ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದೊಳಗಿನ ತಿಕ್ಕಾಟದ ಸಂದರ್ಭದಲ್ಲಿ ಡಿ ಕೆ ಶಿವಕುಮಾರ್ ಮಾತು ಮಹತ್ವ ಪಡೆದಿದೆ.
ಬೆಳಗಾವಿಯಲ್ಲಿ ಸೋಮವಾರ (ಜ.20) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಯಾರ ಜೊತೆಗೂ ಭಿನ್ನಾಭಿಪ್ರಾಯ ಇಲ್ಲ. ಪಕ್ಷದ ಚೌಕಟ್ಟಿನಲ್ಲಿ ಶಿಸ್ತಿನಿಂದ ಕೆಲಸ ಮಾಡುವವರೆಲ್ಲರಿಗೂ ತಲೆಬಾಗಿಸಿ ಸೇವೆ ಮಾಡುತ್ತೇನೆ ಎಂದರು.
ನನಗೆ ಪಕ್ಷ ಮುಖ್ಯ. ನಮ್ಮಲ್ಲಿ ಯಾವುದೇ ಬಂಡಾಯವಿಲ್ಲ. ಎಲ್ಲದಕ್ಕೂ ನನ್ನ ಹೆಸರು ಜೋಡಿಸಬೇಡಿ ಎಂದರು.
ಪಕ್ಷವನ್ನು ಸಂಘಟಿಸುವುದು. ಸರಕಾರ ಭದ್ರವಾಗಿಡುವುದು ಮತ್ತು ಕಾರ್ಯಕರ್ತರನ್ನು ರಕ್ಷಣೆ ಮಾಡುವುದಷ್ಟೆ ನನ್ನ ಕೆಲಸ. ಪಕ್ಷಕ್ಕಾಗಿ ನಾನು ಯಾವಾಗಲೂ ತ್ಯಾಗ ಮಾಡಿಕೊಂಡು ಬಂದಿದ್ದೇನೆ ಎಂದು ಮಾರ್ಮಿಕವಾಗಿ ನುಡಿದರು.
ಈ ಹಿಂದೆ ಧರಂ ಸಿಂಗ್ ಸರಕಾರ ಇದ್ದಾಗಿನಿಂದ ಹಿಡಿದು ಇಲ್ಲಿಯವರೆಗೂ ತ್ಯಾಗ ಮಾಡಿಕೊಂಡು ಬಂದಿದ್ದೇನೆ. ನನಗೆ ಪಕ್ಷ ಮುಖ್ಯ. ಜನರಿಗೆ ಒಳ್ಳೆಯದಾದರೆ ಸಾಕು ಎಂದು ಡಿಕೆ ಶಿವಕುಮಾರ ಹೇಳಿದರು.