ಮನೆ ರಾಜಕೀಯ ಜಾತಿಗಣತಿಗೆ ನಾನು ವಿರೋಧ ವ್ಯಕ್ತಪಡಿಸಿಲ್ಲ: ಡಿ.ಕೆ. ಶಿವಕುಮಾರ್  ಸ್ಪಷ್ಟನೆ

ಜಾತಿಗಣತಿಗೆ ನಾನು ವಿರೋಧ ವ್ಯಕ್ತಪಡಿಸಿಲ್ಲ: ಡಿ.ಕೆ. ಶಿವಕುಮಾರ್  ಸ್ಪಷ್ಟನೆ

0

ಬೆಳಗಾವಿ: ನಾನು ಜಾತಿ ಜನಗಣತಿಗೆ ಎಲ್ಲಿಯೂ ವಿರೋಧ ವ್ಯಕ್ತಪಡಿಸಿಲ್ಲ. ಜಾತಿ ಗಣತಿಯ ಸಮೀಕ್ಷೆ ವೈಜ್ಞಾನಿಕವಾಗಿ ಹಾಗೂ ವ್ಯವಸ್ಥಿತವಾಗಿ ನಡೆಯಬೇಕು ಎಂಬುದಷ್ಟೇ ನಮ್ಮ ಅಭಿಮತ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್  ಸ್ಪಷ್ಟನೆ ನೀಡಿದರು.

ಕರ್ನಾಟಕದಲ್ಲಿ ಜಾತಿ ಜನಗಣತಿ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವರದಿ ಬಿಡುಗಡೆ ವಿರೋಧಿಸಿದ್ದರು. ಈ ವಿಚಾರವಾಗಿ ರಾಜ್ಯ ಸಭೆಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಲಿಷ್ಠ ಜಾತಿ ಜನರೆಲ್ಲಾ ಈ ವಿಚಾರದಲ್ಲಿ ಒಗ್ಗಟ್ಟಾಗಿದ್ದಾರೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಪರೋಕ್ಷ ಹೇಳಿಕೆ ನೀಡಿದ್ದರು.

ಕರ್ನಾಟಕದಲ್ಲಿ ಜಾತಿ ಗಣತಿ ಜಾರಿ ವಿಚಾರವಾಗಿ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ನಿನ್ನೆ ರಾಜ್ಯಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾಗಿ ಮಾಧ್ಯಮದವರು ಡಿಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದರು.

ಬೆಳಗಾವಿಯ ಸುವರ್ಣಸೌಧದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಜಾತಿ ಗಣತಿ ಸಮೀಕ್ಷೆ ಸರಿಯಾಗಿ ನಡೆದಿಲ್ಲ ಎಂದು ನಮ್ಮ ಅನೇಕ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮನೆ, ಮನೆಗೆ ತೆರಳಿ ಸಮೀಕ್ಷೆ ನಡೆಸಿಲ್ಲ ಎಂದು ದೂರುಗಳು ಬಂದಿವೆ. ಎಲ್ಲಾ ಸಮುದಾಯಗಳು ಅವರ ಜನಸಂಖ್ಯೆಗೆ ಅನುಗುಣವಾಗಿ ತಮ್ಮ ಹಕ್ಕನ್ನು ಪಡೆಯಬೇಕು ಎಂದರು.

ಅಲ್ಪಸಂಖ್ಯಾತರು, ಪರಿಶಿಷ್ಟರು ಸೇರಿದಂತೆ ಎಲ್ಲರೂ ತಮ್ಮ ಜನಸಂಖ್ಯೆ ಅನುಗುಣವಾಗಿ ಹಕ್ಕು ಹಾಗೂ ಅನುದಾನ ಕೇಳುತ್ತಾರೆ. ಈ ಜಾತಿ ಗಣತಿಯನ್ನು ವೈಜ್ಞಾನಿಕವಾಗಿ ಮಾಡಲಾಗಿದೆಯೇ ಎಂಬ ವಿಚಾರವಾಗಿ ನಾವು ಸ್ಪಷ್ಟೀಕರಣ ಕೇಳಿದ್ದೇವೆ. ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಮೇಲೆ ನಾವು ನಂಬಿಕೆ ಇಟ್ಟಿದ್ದೇವೆ ಎಂದರು.

ಸಮಾಜದ ಎಲ್ಲಾ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಡುವ ಕಾಂಗ್ರೆಸ್ ಪಕ್ಷದ ಬದ್ಧತೆಗೆ ನಾನು ಬೆಂಬಲವಾಗಿ ನಿಲ್ಲುತ್ತೇನೆ. ಕೇಂದ್ರ ಸರಕಾರದ ವರ್ಗಿಕರಣದ ಅನ್ವಯ ನಾನು ಕೂಡ ಇತರೆ ಹಿಂದುಳಿದ ವರ್ಗದ ಸಮುದಾಯದ ನಾಯಕ. ಪಕ್ಷದ ಅಧ್ಯಕ್ಷನಾಗಿ ನಾನು ಎಲ್ಲಾ ವರ್ಗದ ಜನರನ್ನು ಸಮಾನವಾಗಿ ನೋಡಬೇಕು ಎಂದು ತಿಳಿಸಿದರು.

ಜಾತಿ ಗಣತಿಯ ಕೆಲವು ದಾಖಲೆಗಳು ಕಾಣೆಯಾಗಿರುವ ಬಗ್ಗೆ ವರದಿಗಳಿವೆ ಎಂದು ಕೇಳಿದಾಗ, ಈ ವಿಚಾರ ನನಗೆ ಗೊತ್ತಿಲ್ಲ. ನಾನು ಈ ಬಗ್ಗೆ ಜಯಪ್ರಕಾಶ್ ಹೆಗ್ಡೆ ಅವರೊಂದಿಗೆ ಮಾತನಾಡಿದ್ದು, ಈ ವರದಿಗೆ ಕಾರ್ಯದರ್ಶಿಗಳ ಸಹಿ ಇಲ್ಲವೆಂಬ ಮಾಹಿತಿ ಪಡೆದಿದ್ದೇನೆ. ಕಾರ್ಯದರ್ಶಿಗಳ ಸಹಿ ಇಲ್ಲದೇ ಅದು ಹೇಗೆ ಸಿಂಧುವಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ತಿಳಿಸಿದರು.

ಲೋಕಸಭೆ ಚುನಾವಣೆ ನಂತರ ಪ್ರಭಾವಿ ಸಚಿವರು 50-60 ಶಾಸಕರ ಸಮೇತ ಬಿಜೆಪಿ ಸೇರುತ್ತಾರೆ ಎಂಬ ಕುಮಾರಸ್ವಾಮಿ ಹೇಳಿಕೆ ನಿಮ್ಮನ್ನೇ ಗುರಿ ಮಾಡಿರುವಂತಿದೆ ಎಂದು ಮಾಧ್ಯಮದವರು ಕೇಳಿದಾಗ, ನಾನು ಹುಟ್ಟುತ್ತಲೇ ಕಾಂಗ್ರೆಸಿಗ. ಬೇರೆ ಪಕ್ಷಕ್ಕೆ ಹೋಗಲು ನಾನು ಹುಚ್ಚನಲ್ಲ ಎಂದರು.

ನನಗೆ ನನ್ನದೇ ಆದ ಮೂಲ ಆದರ್ಶಗಳಿವೆ. ನನಗೆ ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್ ಪಕ್ಷದ ಮೇಲೆ ಅಪಾರವಾದ ನಂಬಿಕೆ ಇದೆ. ಅವರು ಮಾತನಾಡಿದ್ದಕ್ಕೆಲ್ಲ ನಾನು ಬಾಧ್ಯಸ್ಥನಲ್ಲ. ಅವರು ಏನಾದರೂ ಹೇಳಿಕೊಂಡು ತಿರುಗಲಿ, ಆ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

ಹಿಂದಿನ ಲೇಖನಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ: ಸಂತ್ರಸ್ತೆಗೆ ಧೈರ್ಯ ತುಂಬಿದ ಸತೀಶ್ ಜಾರಕಿಹೊಳಿ
ಮುಂದಿನ ಲೇಖನಬಾಲಕಿಯೊಂದಿಗೆ ಅನುಚಿತವಾಗಿ ವರ್ತನೆ ಆರೋಪ: ಯುವಕನ ಮೇಲೆ ಅಮಾನುಷ ಹಲ್ಲೆ